ಮೂಡುಬಿದಿರೆ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾರೆಂದು ಭಾವಿಸಿ ಬಜರಂಗದಳದ ಕಾರ್ಯಕರ್ತರು ಇಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿ ವಾಹನ ಪುಡಿಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಮೂಡುಬಿದಿರೆ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ತಂಡ ಬಂಧಿಸಿ, ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಬಜರಂಗದಳ ಕಾರ್ಯಕರ್ತರಾದ ಕಡಂದಲೆಯ ಸುಧೀರ್ ಶೆಟ್ಟಿ ಹಾಗೂ ಸುರತ್ಕಲ್ ಧನರಾಜ್ ಬಂಧಿತರು. ಉಳಿದ ಐವರು ತಲೆಮರೆಸಿಕೊಂಡಿದ್ದಾರೆ.
ಮೂಡುಬಿದಿರೆ ಬಿರಾವಿನ ಕೂಸಪ್ಪ ಪೂಜಾರಿ ಎಂಬವರು ತನ್ನ ಪರಿಚಯದ ಕಾರ್ಕಳ ಬಜಗೋಳಿ ಮನೆಯಿಂದ ರ್ ತಳಿಯ ಹೋರಿಯನ್ನು ಸಂಗಬೆಟ್ಟುವಿನ ಅಬ್ದುಲ್ ರಹ್ಮಾನ್ ಅವರ ವಾಹನದಲ್ಲಿ ಮೂಡುಬಿದಿರೆಗೆ ತರುತ್ತಿದ್ದರು. ಈ ಸಂದರ್ಭ ಬೆಳುವಾಯಿ ಬಳಿ ವಾಹನವನ್ನು ತಡೆದು ನಿಲ್ಲಿಸಿದ ಬಜರಂಗದಳ ಕಾರ್ಯಕರ್ತರು ವಾಹನದಲ್ಲಿದ್ದ ಕೂಸಪ್ಪ ಪೂಜಾರಿ, ಅಬ್ದುಲ್ ರಹ್ಮಾನ್‌ಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ದಾಖಲೆಪತ್ರಗಳನ್ನು ತೋರಿಸಿದರೂ, ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮೂಡುಬಿದಿರೆ ಆಳ್ವಾಸ್ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಮೂಡುಬಿದಿರೆ ಇನ್‌ಸ್ಪೆಕ್ಟರ್ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ. ಕೂಸಪ್ಪ ಪೂಜಾರಿ ನೀಡಿದ ದೂರಿನಂತೆ ಕೊಲೆಯತ್ನ ಪ್ರಕರಣ ದಾಖಲಾಗಿದೆ.