ದೇವದುರ್ಗದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 7ನೇ ರಾಯಚೂರು ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿದರು. ಅಧ್ಯಕ್ಷೆ ಮೀನಾಕ್ಷಿ ಬಾಳೆ, ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್, ಕಾರ್ಯದರ್ಶಿ ವರಲಕ್ಷ್ಮೀ, ಎಚ್.ಪದ್ಮಾ, ತಾಲೂಕು ಅಧ್ಯಕ್ಷೆ ಶಕುಂತಲಾ ದೇಸಾಯಿ, ಸುನಂದ, ರಮಾ, ದಿಲ್ ಶಾದ್ ಇತರರಿದ್ದರು. 
ಜಿಲ್ಲೆ

ದೌರ್ಜನ್ಯ ಪ್ರಶ್ನಿಸುವ ಧೈರ್ಯ ತೋರಿ

ರುದ್ರಪ್ಪ ವಾಲಿ

ದೇವದುರ್ಗ: ಸಮಾಜ ಎಷ್ಟೇ ಅಭಿವೃದ್ಧಿ ಹೊಂದಿ, ಸುಶಿಕ್ಷಿತರಾದರೂ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ. ದೌರ್ಜನ್ಯ ವಿರುದ್ಧ ಮಹಿಳೆಯರು ಧ್ವನಿ ಎತ್ತುವ ಧೈರ್ಯ ತೋರಬೇಕು. ಅಂದಾಗ ಮಾತ್ರ ದಬ್ಬಾಳಿಕೆ ತಡೆಯಲು ಸಾಧ್ಯ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 7ನೇ ರಾಯಚೂರು ಜಿಲ್ಲಾ ಸಮ್ಮೇಳನದಲ್ಲಿ ಬುಧವಾರ ಮಾತನಾಡಿದರು.

ಮಹಿಳೆಯರ ಮೇಲಿನ ದೌರ್ಜನ್ಯ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಮನೆಯಿಂದ ಆರಂಭವಾಗುವ ದೌರ್ಜನ್ಯ ಅಧಿಕಾರ ಸಿಕ್ಕರೂ ಅಲ್ಲಿಯೂ ದಬ್ಬಾಳಿಕೆ ನಡೆಯುತ್ತದೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲೂ ಮಹಿಳೆ ಪ್ರತಿಭೆಗೆ ತಕ್ಕಂತೆ ಅಧಿಕಾರ, ಸ್ಥಾನಮಾನ ಸಿಗುತ್ತಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಇಂಥಹ ದೌರ್ಜನ್ಯದ ವಿರುದ್ಧ ಪ್ರತಿಯೊಬ್ಬರೂ ಪ್ರತಿಭಟಿಸಲೇಬೇಕಿದೆ ಎಂದರು.

ರಾಜ್ಯ ಕಾರ್ಯದರ್ಶಿ ಶ್ರೀದೇವಿ ಮಾತನಾಡಿ, ಮಹಿಳೆಯರು ಸಂಘಟಿತರಾಗಿ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಬೇಕಿದೆ. ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆ, ಸುಲಿಗೆ, ಲಿಂಗತಾರತಮ್ಯ ನಿರಂತರವಾಗಿ ನಡೆಯುತ್ತಿದೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಸರ್ಕಾರ ಕಣ್ಣಮ್ಮುಚ್ಚಿ ಕುಳಿತಿವೆ. ಸಮಾಜದಲ್ಲಿ ಇನ್ನೂ ಭ್ರೂಣ ಹತ್ಯೆಗಳು ನಿಂತಿಲ್ಲ. ಮಹಿಳೆಯರ ಮೇಲೆ ನಡೆಯುವ ಈ ಅನ್ಯಾಯಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದು ಹೇಳಿದರು.

ಸಂವಿಧಾನದ ಹಕ್ಕು ಎಲ್ಲರಿಗೂ ದೊರಕಬೇಕಿದೆ. ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಶೋಷಣೆಗೊಳಗಾದ ಮಹಿಳೆಯರನ್ನು ರಕ್ಷಿಸಬೇಕಿದೆ. ಸರ್ಕಾರದ ಗೃಹಲಕ್ಷ್ಮಿ, ಉಚಿತ ಬಸ್‌ಪಾಸ್ ಬೇಕಾಗಿಲ್ಲ. ಅದರ ಬದಲು ಮಹಿಳೆಯರಿಗೆ ರಕ್ಷಣೆ ಬೇಕಾಗಿದೆ. ಮೈಕ್ರೋ ಫೈನಾನ್ಸ್‌ಗಳಿಂದ ರಕ್ಷಣೆ ಮಾಡಬೇಕು. ಮಹಿಳೆಯರಿಗೆ ಸಿಗಬೇಕಾದ ರಕ್ಷಣೆ, ಗೌರವ, ಸಾಮಾಜಿಕ, ನ್ಯಾಯ ಸಿಗಬೇಕಾಗಿದೆ ಎಂದರು.