ಜಿಲ್ಲೆ

ದಾನ-ಧರ್ಮದಿಂದ ಪಾಪ ಪರಿಹಾರ

ಮರಿದೇವ ಹೂಗಾರ

ಹುಬ್ಬಳ್ಳಿ: ಪಾಪಗಳು ದಾನ-ಧರ್ಮದಿಂದ ಮಾತ್ರ ಪರಿಹಾರವಾಗಲು ಸಾಧ್ಯ. ದಾನವಾಗಿ ಬಂದ ಹಣ, ವಸ್ತುಗಳ ಸದುಪಯೋಗ ಆದಾಗ ಮಾತ್ರ ಪರಮಾತ್ಮ ತೃಪ್ತನಾಗುತ್ತಾನೆ. ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಶಿರಹಟ್ಟಿಯ ಫಕೀರ ಸಿದ್ಧರಾಮೇಶ್ವರ ಶ್ರೀಗಳ ಅಮೃತ ಮಹೋತ್ಸವಕ್ಕೆ ಸಹಾಯ, ಸಹಕಾರ ಹಾಗೂ ಸೇವೆ ಸಲ್ಲಿಸಿದವರಿಗಾಗಿ ಶನಿವಾರ ನಗರದ ಚವ್ಹಾಣ ಗಾರ್ಡನ್‌ನಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಎಲ್ಲೇ ಕಾರ್ಯಕ್ರಮ ಮಾಡಿದರೂ ಲೆಕ್ಕ ಪತ್ರ ಇಡುತ್ತೇವೆ. 2014ರಲ್ಲಿ ಬಾಲೆಹೊಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದ ಲೆಕ್ಕಪತ್ರಗಳು ಇಂದಿಗೂ ಇವೆ. ಪ್ರತಿಯೊಬ್ಬ ಭಕ್ತರು ನೀಡಿದ ಪೈಸೆ ಪೈಸೆ ಲೆಕ್ಕವೂ ನಮ್ಮಲ್ಲಿದೆ. ಇತ್ತೀಚೆಗೆ ನಡೆದ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಭಕ್ತರು ತನು, ಮನ, ಧನದಿಂದ ಸಹಾಯ ಮಾಡಿದ್ದಾರೆ. ಭಕ್ತರು ದಾನವಾಗಿ ನೀಡಿದ ಹಣ, ವಸ್ತುಗಳ ಲೆಕ್ಕವನ್ನು ಯಾರು ಯಾವಾಗ ಬೇಕಾದರೂ ಪರಿಶೀಲಿಸಬಹುದು ಎಂದರು.
ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಫಕೀರ ಸಿದ್ದರಾಮೇಶ್ವರ ಶ್ರೀಗಳ ಅಮೃತ ಮಹೋತ್ಸವ ಕಾರ್ಯಕ್ರಮ ನಾಡಿನಾದ್ಯಂತ ದಾಖಲೆ ಬರೆದಿದೆ. ಮಹತ್ವಾಕಾಂಕ್ಷೆಯ ಗುಣವುಳ್ಳಿ ಫಕೀರ ದಿಂಗಾಲೇಶ್ವರ ಶ್ರೀಗಳ ಗುರುಭಕ್ತಿ ಮತ್ತು ಛಲದಿಂದಲೇ ಕಾರ್ಯಕ್ರಮ ಯಶಸ್ವಿಯಾಗಿದೆ. ಗುರುವಿನ ಖುಣ ತೀರಿಸುವ ಸಲುವಾಗಿ ದಿಂಗಾಲೇಶ್ವರರು ಐತಿಹಾಸಿಕ ಕಾರ್ಯಕ್ರಮ ಆಯೋಜಿಸಿ, ಯಶಸ್ವಿಯಾಗಿಸಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ‘ನ ಭೂತೋ’ ಎಂಬಂತೆ ದಿಂಗಾಲೇಶ್ವರ ಶ್ರೀಗಳು ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ಮಾಡಿದ್ದಾರೆ. ನನ್ನ ಇಡೀ ಜೀವನಾವಧಿಯಲ್ಲಿ ಆನೆ ಅಂಬಾರಿಯ ಮೇಲೆ ಶ್ರೀಗಳ ತುಲಾಭಾರ ನೋಡಿರಲಿಲ್ಲ. ನಾನು ಎಲ್ಲೇ ಹೋದರೂ ಹುಬ್ಬಳ್ಳಿಯ ಈ ಐತಿಹಾಸಿಕ ಕಾರ್ಯಕ್ರಮದ ಬಗ್ಗೆ ವಿವಿಧ ಮಠಾಧೀಶರು ಹಾಗೂ ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಶಿರಹಟ್ಟಿ ಸಂಸ್ಥಾನ ಮಠಕ್ಕೆ ನೂರು ವರ್ಷದ ಇತಿಹಾಸವಿದೆ. ಎಲ್ಲ ಜಾತಿ, ಧರ್ಮದ ಭಕ್ತರಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲ ಜಾತಿ, ಧರ್ಮೀಯರೂ ಸೇರಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತಾಗಬೇಕು. ಇದನ್ನು ದಿಂಗಾಲೇಶ್ವರ ಶ್ರೀಗಳೇ ಮಾಡಬೇಕು. ಇದರಿಂದ ಸಾಮಾಜದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುತ್ತದೆ ಎಂದರು.
ಇದೇ ವೇಳೆ, ಅಮೃತ ಮಹೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ, ಪರೋಕ್ಷವಾಗಿ ದುಡಿದವರನ್ನು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು.
ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಬಮ್ಮನಹಳ್ಳಿ ವಿರಕ್ತ ಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ನವನಗರದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ರಾಯನಾಳದ ಶ್ರೀ ರೇವಣಸಿದ್ಧ ಸ್ವಾಮೀಜಿ, ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜ ಸ್ವಾಮೀಜಿ, ಹಿರಿಯ ವರ್ತಕ ಜಿ.ಎಂ. ಚಿಕ್ಕಮಠ, ಲೆಕ್ಕ ಪರಿಶೋಧಕ ಎನ್.ಎ. ಚರಂತಿಮಠ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಸರಸ್ವತಿ ಧೋಂಗಡಿ, ಉದ್ಯಮಿ ಉದಯ ಪುರಾಣಿಕಮಠ, ಮುಖಂಡರಾದ ಶರಣಪ್ಪ ಕೊಟಗಿ, ಅನಿಲಕುಮಾರ ಪಾಟೀಲ, ಡಾ. ಅಬ್ದುಲ್ ಕರೀಂಸಾಬ್, ಎ.ಎನ್. ಹಿರೇಮಠ ಇದ್ದರು.