ಜಿಲ್ಲೆ

ಯುವಜನರ ಆತ್ಮಸ್ಥೈರ್ಯ ಕಸಿದಿರುವ ಕೆಪಿಎಸ್ಸಿ  ಎಡವಟ್ಟು

ತುಮಕೂರು: ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಗೊಂದಲಗಳಿಂದ ಇತ್ತೀಚೆಗೆ ನಡೆದ ಕೆಪಿಎಸ್​ಸಿ ಪರೀಕ್ಷೆಯಲ್ಲಿ ಆಗಿರುವ ಎಡವಟ್ಟು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಯುವಜನರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಅಭಿಪ್ರಾಯಪಟ್ಟರು.

ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ತುಮಕೂರು ವಿವಿ ಸಹಯೋಗದಲ್ಲಿ ಹಾಲಪ್ಪ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಆತ್ಮವಿಶ್ವಾಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರೀಕ್ಷಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಯುಪಿಎಸ್ಸಿ ಪರೀಕ್ಷೆಯ ರೀತಿಯೇ ಕೆಪಿಎಸ್ಸಿ ಪರೀಕ್ಷೆಯೂ ನಡೆಯಬೇಕು, ಇದುವರೆಗೂ ವೇಳಾಪಟ್ಟಿ ಪ್ರಕಟಣೆ, ಪರೀಕ್ಷೆಗಳನ್ನು ನಡೆಸುವ ರೀತಿ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಅನೇಕ ಬದಲಾವಣೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಆಕಾಂಕ್ಷಿಗಳು ಬಯಸಿದ್ದಾರೆ. ಕೇಂದ್ರ ಸರ್ಕಾರ ನಡೆಸುವ ರೈಲ್ವೆ, ಐಪಿಪಿಎಸ್​, ಎಸ್​ಎಸ್​ಸಿ, ನ್ಯಾಷನಲ್​ ಡಿಫೇನ್ಸ್​ ಅಕಾಡೆಮಿ ಪರೀಕ್ಷೆಗಳಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲದ ಕಾರಣ, ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿಯೂ ಮಾತೃಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಬರೆಯಲು ಅವಕಾಶ ಸಿಗಬೇಕು ಎಂಬುದು ಬಹುತೇಕ ಅಭ್ಯರ್ಥಿಗಳ ಬಯಕೆಯಾಗಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆಯಿಂದ ಯುಪಿಎಸ್ಸಿ ಪರೀಕ್ಷೆ ಪ್ರಥಮ ಹಂತದ ಪರೀಕ್ಷೆ ಪಾಸು ಮಾಡಿ, ಮುಖ್ಯ ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ತುಮಕೂರು ಜಿಲ್ಲೆಯ ಸಮಾನ ಮನಸ್ಕ ಗೆಳೆಯರು ಸೇರಿ ದೆಹಲಿಯ ಐಎಎಸ್​ ತರಬೇತಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಜಿಲ್ಲೆಯ 12 ಜನ ಅಭ್ಯರ್ಥಿಗಳಿಗೆ ಊಟ ತಿಂಡಿಯ ಜತೆಗೆ, ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ನವೋದಯ ಐಎಎಸ್​ ಅಕಾಡೆಮಿಯ ಗೌರವಾಧ್ಯಕ್ಷ ನಾಗರಾಜರಾವ್​ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಗೆ ಹೋಲಿಸಿದರೆ ಐಎಎಸ್​, ಕೆಎಎಸ್​ ಪರೀಕ್ಷೆಗಳಿಗೆ ಇತ್ತೀಚಿನ ದಿನಗಳಲ್ಲಿ ಪೈಪೋಟಿ ಹೆಚ್ಚಿದೆ. ಇಂಜಿನಿಯರಿಂಗ್​, ಮೆಡಿಕಲ್​, ಐಐಟಿ ಕಲಿತವರು ಸಹ ಸಿವಿಲ್​ ಸರ್ವಿಸ್​ ಏಕ್ಸಾಂ ತೆಗೆದುಕೊಳ್ಳುತ್ತಿರುವ ಕಾರಣ, ಕಲೆ, ಸಾಹಿತ್ಯ, ವಿಜ್ಞಾನ ಓದಿದ ಮಕ್ಕಳು ಹೆಚ್ಚು ಸ್ಪರ್ಧೆಯನ್ನು ಎದುರಿಸಬೇಕಾಗಿದೆ ಎಂದರು.

ವೇದಿಕೆಯಲ್ಲಿ ಕೃಷ್ಣ ಎಜುಕೇಷನ್​ ಟ್ರಸ್ಟ್​ ಅಧ್ಯೆ ಮರಿಚನ್ನಮ್ಮ, ಕಾಂಗ್ರೆಸ್​ ಮುಖಂಡ ರೇವಣ್ಣಸಿದ್ದಯ್ಯ, ಪ್ರಗತಿಪರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ವಿ.ಬಸವರಾಜು, ಗ್ರಾಹಕರ ವೇದಿಕೆಯ ಟಿ.ಎಸ್​.ನಿರಂಜನ್​, ದೀಪ್ತಿ ರಾಜೇಶ್​, ಸಿದ್ದಗಂಗಾ ಐಎಎಸ್​ ಅಕಾಡೆಮಿ, ತ್ರಿವೇಣಿ ಪೃಥ್ವಿ ಐಎಎಸ್​ ಅಕಾಡೆಮಿ, ವಿಭೂಷಣ್​, ಬಿ.ಬೈಹರ್ಟ್​ ಕ್ಲಾಸಸ್​ ಮತ್ತಿತರರು ಇದ್ದರು.