ಜಿಲ್ಲೆ

15 ಲಕ್ಷ ಚೀಲಕ್ಕೆ ತುಂಬಿದ್ದ ಗ್ಯಾಂಗ್ ಹೊರಡುವಷ್ಟರಲ್ಲಿ ಖಾಕಿ ಪಡೆ ಪ್ರತ್ಯಕ್ಷ; ಎಟಿಎಂ ಕಳ್ಳರ ಜೈಲಿಗಟ್ಟಿದ ಸೆನ್ಸಾರ್!

ಬೆಂಗಳೂರು:  ಕಳ್ಳರು ಎಟಿಎಂಗೆ ನುಗ್ಗಿದೊಡನೆಯೇ ಬೂತ್​ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಮತ್ತು ಸೆನ್ಸಾರ್ ಸೆಕ್ಯೂರಿಟಿ ಏಜೆನ್ಸಿಗೆ ಮಾಹಿತಿ ರವಾನಿಸಿದ್ದರಿಂದ ದರೋಡೆಕೋರರು ಖಾಕಿ ಬಲೆಗೆ ಬಿದ್ದಿದ್ದಾರೆ.

ಪಂಜಾಬ್ ಮೂಲದ ಹರ್ಷ ಅರೂರ್ (36) ಮತ್ತು ಸಮರ್​ಜೋತ್ ಸಿಂಗ್ (35) ಬಂಧಿತರು.

ಶೋಕಿ ಜೀವನಕ್ಕೆ ಮಾರುಹೋಗಿದ್ದ ಆರೋಪಿಗಳು ಸುಲಭವಾಗಿ ಹಣ ಸಂಪಾದನೆ ಮಾಡá-ವ ಉದ್ದೇಶದಿಂದ ಕಳ್ಳತನಕ್ಕಿಳಿ ದಿದ್ದರು. ಜನ ಸಂಚಾರ ಕಡಿಮೆಯಿರುವ ಏರಿಯಾಗಳ ಎಟಿಎಂ ಬೂತ್​ಗಳನ್ನು ಗುರುತಿಸುತ್ತಿದ್ದ ಖದೀಮರು ರಾತ್ರಿ ವೇಳೆ ಕಾರಿನಲ್ಲಿ ಬಂದು ವಿದ್ಯುತ್ ಸಂಪರ್ಕ ಕಡಿತ ಮಾಡಿ ಗ್ಯಾಸ್ ಕಟರ್ ಬಳಸಿ ಎಟಿಎಂಗಳಲ್ಲಿ ಹಣ ದೋಚುತ್ತಿದ್ದರು.

ಆರೋಪಿಗಳು ಜ.26ರ ಮಧ್ಯರಾತ್ರಿ ನಗರದ ಎಟಿಎಂ ಬೂತ್​ವೊಂದಕ್ಕೆ ಕನ್ನ ಹಾಕಿದ್ದು, ಬೂತ್​ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಮತ್ತು ಸೆನ್ಸಾರ್ ಮುಂಬೈನಲ್ಲಿನ ಸೆಕ್ಯೂರಿಟಿ ಏಜೆನ್ಸಿ ಮಾಸ್ಟರ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದೆ. ಅಲ್ಲಿನ ಸಿಬ್ಬಂದಿ ಬೆಂಗಳೂರಿನ ಏಜೆನ್ಸಿಗೆ ಮಾಹಿತಿ ರವಾನಿಸಿದ್ದು, ನಮ್ಮ-100ಗೆ ಕರೆ ಮಾಡಿ ದೂರು ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರಿಗೆ ಮೈಸೂರು ರಸ್ತೆಯಲ್ಲಿರುವ ಬಿಎಚ್​ಇಎಲ್ ಮುಂಭಾಗದ ಎಟಿಎಂ ಬೂತ್​ನಲ್ಲಿ ಕಳ್ಳತನ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.

ಮತ್ತೊಂದೆಡೆ ಬ್ಯಾಟರಾಯನಪುರ ಗಸ್ತು ಹೊಯ್ಸಳ ಸಿಬ್ಬಂದಿ ಎಸ್​ಬಿಎಂ ಎಟಿಎಂ ಬಳಿಗೆ ಬಂದಾಗ ಶೆಟರ್ ಲಾಕ್ ಆಗಿದ್ದು, ಸುಟ್ಟ ವಾಸನೆ ಬರುತ್ತಿತ್ತು. ಒಳಗೆ ಅಪರಿಚಿತರು ಇರುವ ಶಂಕೆ ಮೇಲೆ ರೂಲಿಂಗ್ ಶೆಟರ್ ತೆಗೆಯಲು ಗಸ್ತು ಸಿಬ್ಬಂದಿ ಮುಂದಾದಾಗ ಕಳ್ಳರು ರಾಡ್​ನಿಂದ ಪೇದೆಗಳ ಕಾಲಿಗೆ ಹಲ್ಲೆ ನಡೆಸಿದ್ದರು. ಎಚ್ಚರದಿಂದ ಶೆಟರ್ ತೆಗೆದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

ಯೂಟ್ಯೂಬ್​ನಲ್ಲಿ ಕಳ್ಳತನ ಕಲಿತ ಕುಸ್ತಿಪಟು: ಚಿಕ್ಕ ವಯಸ್ಸಿಗೆ ಓದು ಬಿಟ್ಟ ಹರ್ಷ ಅರೂರ್, ಸ್ಥಳೀಯವಾಗಿ ಕುಸ್ತಿಪಟುವಾಗಿ ಖ್ಯಾತಿ ಗಳಿಸಿದ್ದ. ಬಳಿಕ ಸಮರ್​ಜೋತ್ ಜತೆ ಬೆಂಗಳೂರಿಗೆ ಬಂದು ದರೋಡೆಗೆ ಪ್ಲಾ್ಯನ್ ಮಾಡಿದ್ದ. ಯೂಟ್ಯೂಬ್​ನಲ್ಲಿ ಎಟಿಎಂ ಲೂಟಿ ಮಾಡುವುದನ್ನು ಕಲಿತು ಕೃತ್ಯ ನಡೆಸುತ್ತಿದ್ದರು.

2 ಸಕ್ಸಸ್, 2 ಫೇಲ್ಯೂರ್

ಈ ಹಿಂದೆ ಜೆ.ಪಿ.ನಗರ ಮತ್ತು ಮೈಕೋ ಲೇಔಟ್​ನಲ್ಲಿ ಎಟಿಎಂ ಹಣ ದೋಚಲು ಯತ್ನಿಸಿ ವಿಫಲರಾಗಿದ್ದ ಆರೋಪಿಗಳು, ಪರಪ್ಪನ ಅಗ್ರಹಾರದಲ್ಲಿ ಕೆನರಾ ಬ್ಯಾಂಕ್ ಎಟಿಎಂ ಬೂತ್​ನ್ನು ಗ್ಯಾಸ್ ಕಟರ್​ನಿಂದ ಕತ್ತರಿಸಿ 23 ಲಕ್ಷ ರೂ. ದೋಚಿದ್ದರು. ಬ್ಯಾಟರಾಯನಪುರದ ಎಸ್​ಬಿಐ ಎಟಿಎಂ ಕತ್ತರಿಸಿ 15 ಲಕ್ಷ ರೂ.ಗಳನ್ನು ಆಗಲೇ ಚೀಲಕ್ಕೆ ತುಂಬಿದ್ದರು. ಇನ್ನೇನು ಹೊರ ಬರಬೇಕೆನ್ನುವಷ್ಟರಲ್ಲಿ ಪೊಲೀಸರು ಕೋಳ ತೊಡಿಸಿದ್ದಾರೆ.