ಜಿಲ್ಲೆ

ಅತಿಸಾರ ತಡೆಗಟ್ಟುವಿಕೆ ಅಭಿಯಾನ ಉದ್ಘಾಟನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆಸಲಾಗುತ್ತಿರುವ ಅತಿಸಾರ ತಡೆಗಟ್ಟುವಿಕೆ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಕ್ಕಳ ವಿಭಾಗದಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಕುಮಾರ್ ಮಾತಾಡಿ, ಅತಿಸಾರ ತಡೆಗಟ್ಟುವಿಕೆ ಅಭಿಯಾನ-2025 ಜೂ.16ರಿಂದ ಜು.31ರ ತನಕ ಆಯೋಜಿಸಲಾಗಿದ್ದು ಈ ಅಭಿಯಾನದಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ಐದು ವರ್ಷದ ಒಳಗಿನ ಮಕ್ಕಳಿಗೆ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಒಂದು ಮಗುವಿಗೆ ಎರಡು ಪ್ಯಾಕೆಟ್ ಓ ಆರ್ ಎಸ್ ಮತ್ತು ಒಂದು ಸ್ಟ್ರಿಪ್ ಜಿಂಕ್ ಮಾತ್ರೆ ಕೊಡುತ್ತಾರೆ. ಇದನ್ನು ಮುನ್ನೆಚ್ಚರಿಕಾ ಕ್ರಮವಾಗಿ ನೀಡುತ್ತಿದ್ದು, ಭೇದಿ ಆದಲ್ಲಿ ಮಾತ್ರ ಓ ಆರ್ ಎಸ್ ಮತ್ತು ಜಿಂಕ್ ಮಾತ್ರೆಯನ್ನು 14 ದಿನಗಳವರೆಗೆ ಉಪಯೋಗಿಸಬೇಕು. ಈ ಮಾಹಿತಿಯು ಪ್ರತಿಯೊಬ್ಬ ಪೋಷಕರಿಗೂ ನೀಡಲಾಗುತ್ತಿದೆ. ಗುಣಮುಖವಾಗದಿದ್ದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೋರಿಸಬೇಕು ಅತಿಸಾರದಿಂದ ಉಂಟಾಗುವ ತಡೆಗಟ್ಟಬಹುದಾದಂಥ ಮರಣವನ್ನು ತಪ್ಪಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಂಜುAಡಯ್ಯ ಮಾತನಾಡಿ ಅತಿಸಾರದಿಂದ ಶೂನ್ಯ ಮರಣ ಎಂಬ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. ಗ್ರಾಮ ಆರೋಗ್ಯ ದಿನಾಚರಣೆ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ, ಅಂಗನವಾಡಿ ಮತ್ತು ಶಾಲೆಗಳಲ್ಲಿ, ವಸತಿ ನಿಲಯಗಳಲ್ಲಿ ಎಲ್ಲ ಸ್ವಸಹಾಯ ಗುಂಪುಗಳಲ್ಲಿ ಸಭೆಯನ್ನು ಏರ್ಪಡಿಸಿ ಮಾಹಿತಿ ನೀಡಲಾಗುತ್ತದೆ. ಸ್ವಚ್ಛತೆ ಬಗ್ಗೆ ಮತ್ತು ಕೈ ತೊಳೆಯುವ ಬಗ್ಗೆ ಮಾಹಿತಿ ಕೊಡಲಾಗುತ್ತದೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾಗಿದೆ ಎಂದರು.

ಮಕ್ಕಳ ವೈದ್ಯೆ ಡಾ. ದಿವ್ಯರಾಣಿ ಮಾತನಾಡಿ ಅತಿಸಾರ ಆದಾಗ ತಕ್ಷಣವೇ ತಯಾರಿಸುವ ಮನೆಮಟ್ಟದ ಒಆರ್‌ಎಸ್ (6 ಟೀ ಸ್ಪೂನ್ ಸಕ್ಕರೆ ಮತ್ತು ಅರ್ಧ ಟೀ ಸ್ಪೂನ್ ಉಪ್ಪನ್ನು ಶುದ್ಧ ಕುಡಿಯುವ ಒಂದು ಲೀಟರ್ ನೀರಿಗೆ) ಮಿಶ್ರಣ ಮಾಡಿ ಕುಡಿಸಬೇಕು. ಹುಳಿ ಅಂಶ ಮಿಶ್ರಣ ಮಾಡಬಾರದು. ಹಣ್ಣಿನ ಜ್ಯೂಸ್‌ಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಸಕ್ಕರೆಯನ್ನು ಮಿಶ್ರಣ ಮಾಡಬಾರದು ಎಂದು ಮಾಹಿತಿ ನೀಡಿದರು.

ಆರ್‌ಸಿಹೆಚ್‌ಒ ಡಾ. ಮಧುಸೂದನ್, ಡಾ. ಪುರುಷೋತ್ತಮ್, ಡಾ. ಸಲ್ಮಾ ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ, ಗಾಯತ್ರಿ, ದೇವರಾಜು, ಅತುಲ್, ಅನಂತ್ ಇದ್ದರು.

ಇದೇ ವೇಳೆ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಆರೋಗ್ಯ ಸಿಬ್ಬಂದಿ ವರ್ಗದವರು ಕೈ ತೊಳೆಯುವ ವಿಧಾನದ ಬಗ್ಗೆ ಓ ಆರ್ ಎಸ್ ದ್ರಾವಣ ತಯಾರಿಸುವ ಬಗ್ಗೆ ಪ್ರಾತಕ್ಷಿಕೆ ಮಾಡಿ ತೋರಿಸಿದರು.