ಬಂಕಾಪುರ: ಬೀದಿ ಬದಿ ವ್ಯಾಪಾರಸ್ಥರಿಂದ ಅತಿಕ್ರಮಣಕ್ಕೆ ಒಳಗಾಗಿದ್ದ ಪಟ್ಟಣದ ಶಹಬಜಾರ ಮುಖ್ಯ ರಸ್ತೆಯ ಪಶು ಆಸ್ಪತ್ರೆ ಕಾಂಪೌಂಡ್ ಪಕ್ಕ ಮತ್ತು ದರ್ಗಾ ಎದುರಿಗಿನ ಐತಿಹಾಸಿಕ ನಾಗದೇವರ ಕಟ್ಟೆ ಮತ್ತು ಐತಿಹಾಸಿಕ ಸೇದೋ ಬಾವಿಯನ್ನು ಪುರಸಭೆ ಸಿಬ್ಬಂದಿ ಸ್ವಚ್ಛಗೊಳಿಸಿದ್ದು, ಸೋಮವಾರ ಮಹಿಳೆಯರು ನಾಗದೇವರ ಮೂರ್ತಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು.
ಪಟ್ಟಣದ ಬೀದಿ ವ್ಯಾಪಾರಸ್ಥರಿಂದ ಅತಿಕ್ರಮಣವಾಗಿದ್ದ ನಾಗದೇವರ ಕಟ್ಟೆ ಮತ್ತು ಸೇದೋ ಬಾವಿಯ ಅಕ್ಕಪಕ್ಕದ ಜಾಗದಲ್ಲಿ ವ್ಯಾಪಾರಸ್ಥರು ಮಲಮೂತ್ರ ವಿಸರ್ಜನೆಗೆ ಬಳಕೆ ಮಾಡುತ್ತಿರುವ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ನಾಗರ ಪಂಚಮಿಯಂದು ನಾಗದೇವತೆಯ ದರ್ಶನಕ್ಕೆ ಹೋಗದಂತಾಗಿದ್ದು, ಭಕ್ತರ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ಕುರಿತು ‘ನಾಗದೇವರ ಕಟ್ಟೆ ಅತಿಕ್ರಮಣ ತೆರವಾಗಲಿ’ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ಜು. 26 ರಂದು ಸುದ್ದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜನ್ನವರ, ನಾಗದೇವರ ಕಟ್ಟೆ ಸುತ್ತಮುತ್ತ ಸ್ವಚ್ಛತೆ ಕೈಗೊಂಡು, ದೇವರ ಎದುರಿದ್ದ ಗೂಡಂಗಡಿಯನ್ನು ಪಕ್ಕಕ್ಕೆ ಸರಿಸಿ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಹೀಗಾಗಿ, ಸೋಮವಾರ ನಾಗರ ಪಂಚಮಿ ನಿಮಿತ್ತ ಭಕ್ತರು ಸ್ಥಳವನ್ನು ಶುಚಿಗೊಳಿಸಿ ತಳಿರು ತೋರಣ ಕಟ್ಟಿ ನಾಗರಕಟ್ಟೆಯ ಮುಂದೆ ರಂಗೋಲಿ ಹಾಕಿ ನಾಗದೇವರ ಕಲ್ಲಿನ ಮೂರ್ತಿಗೆ ಹಾಲೆರೆದು ಹಬ್ಬ ಆಚರಿಸಿದರು. ನಾಗರದೇವರ ದರ್ಶನಕ್ಕೆ ಅಡ್ಡವಾಗಿರುವ ಇನ್ನಷ್ಟು ಗೂಡಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜನ್ನವರ ಅವರನ್ನು ಒತ್ತಾಯಿಸಿದ್ದಾರೆ.