ಮಂಗಳೂರು: ಸಹಕಾರ ಕ್ಷೇತ್ರದ ವಿಶೇಷ ಸಾಧನೆಗಾಗಿ ದ.ಕ. ಜಿಲ್ಲಾಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರಿಗೆ 2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಚಿತ್ತರಂಜನ್ ಬೋಳಾರ್‌ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಆಡಳಿತ ಮಂಡಳಿ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಅವರ ಕ್ರಿಯಾಶೀಲತೆಯಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ 10 ವರ್ಷಗಳಲ್ಲಿ 30 ಶಾಖೆಗಳನ್ನು ಆರಂಭಿಸಿ 100ಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಿ 2,000 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ಮೂಲಕ ಸಹಕಾರ ರಂಗದಲ್ಲಿ ಅಪೂರ್ವ ಸಾಧನೆ ತೋರಿದೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ಮತ್ತು ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಹಕಾರ ಕ್ಷೇತ್ರದ ಸಾಧನೆ ಗುರುತಿಸಿ ಐಕಾನ್ಸ್ ಆಫ್ ಇಂಡಿಯನ್ ಬಿಜಿನೆಸ್ ಸಂಸ್ಥೆಯಿಂದ ಕರ್ನಾಟಕ ಗ್ಲೋರಿ ಅವಾರ್ಡ್-2023ರ ಐಐಬಿ ಬೆಸ್ಟ್ ಲೀಡರ್‌ಶಿಪ್ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ, ಪರಿವರ್ತನಶ್ರೀ ರಾಜ್ಯ ಪ್ರಶಸ್ತಿ, ಸಮಾಜರತ್ನ ಪ್ರಶಸ್ತಿ, ಉತ್ತಮ ಸಹಕಾರಿ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ , ಗುರುಶ್ರೀ ಪ್ರಶಸ್ತಿ, ಶ್ರೀ ಕೃಷ್ಣಾನುಗೃಹ ರಾಜ್ಯ ಪ್ರಶಸ್ತಿ, ಸಜ್ಜನ ಚಂದನ ಸದ್ಭಾವನಾ ಪ್ರಶಸ್ತಿ, ಪೊಸಕುರಲ್ ವಾಹಿನಿ ಸಾಧನಾ ಪ್ರಶಸ್ತಿ ಪುರಸ್ಕಾರ ಜತೆಗೆ 100ಕ್ಕೂ ಮಿಕ್ಕಿ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿದೆ.
ಸಮಾಜಮುಖಿ ಕಾರ್ಯಗಳು
ಚಿತ್ತರಂಜನ್ ಬೋಳಾರ್ ಸಹಕಾರಿ ಸಂಘದ ಮೂಲಕ 55ಕ್ಕೂ ಮಿಕ್ಕಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿ 400ಕ್ಕೂ ಮಿಕ್ಕಿ ಕಣ್ಣಿನ ಶಸ್ತ್ರಚಿಕಿತ್ಸೆ, 12,000ಕ್ಕೂ ಮಿಕ್ಕಿ ಉಚಿತ ಕನ್ನಡಕ ವಿತರಣೆ, ಉಚಿತ ಔಷಧ ವಿತರಣೆ ಹಾಗೂ ಚಿಕಿತ್ಸೆ ಶಿಬಿರಗಳನ್ನು ಮಾಡುವ ಜತೆಗೆ ಒತ್ತಡ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಹಾಗೂ ಕಾನ್ಸರ್ ಮುಂತಾದ ಮಾಹಿತಿ ಕಾರ್ಯಾಗಾರಗಳನ್ನೂ ಏರ್ಪಡಿಸಿದ್ದಾರೆ. ಜನರ ಉಪಯೋಗಕ್ಕಾಗಿ ಬಸ್ ತಂಗುದಾಣ ನಿರ್ಮಾಣ, ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್/ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ಬಡ ಕುಟುಂಬಕ್ಕೆ ಮನೆ ಮರು ನಿರ್ಮಾಣ ಮುಂತಾದ ಜನಪರ ಕಾರ್ಯಕ್ರಮ ಆಯೋಜಿಸಿದ್ದಾರೆ.