ಕೂಡಿಗೆಯ ಕೊಡಗು ಸೈನಿಕ ಶಾಲೆಯ ಅಸ್ಟ್ರೋ ಟರ್ಫ್ ಹಾಕಿ ಮೈದಾನದಲ್ಲಿ ಆಯೋಜಿಸಿದ್ದ ಅಖಿಲ ಭಾರತೀಯ ಸೈನಿಕ ಶಾಲೆಗಳ ಗುಂಪು- ಎಚ್ ವಿಭಾಗದ ಹಾಕಿ ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದ ಸ್ಪರ್ಧೆಯ ದೃಶ್ಯ. 
ಜಿಲ್ಲೆ

ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳು

ಲೋಕೇಶ್ ಮನು. ಡಿ

ಕುಶಾಲನಗರ: ಕೂಡಿಗೆಯ ಕೊಡಗು ಸೈನಿಕ ಶಾಲೆಯ ಅಸ್ಟ್ರೋ ಟರ್ಫ್ ಹಾಕಿ ಮೈದಾನದಲ್ಲಿ ಜೂ. 9ರಿಂದ ಆರಂಭವಾಗಿದ್ದ ಅಖಿಲ ಭಾರತೀಯ ಸೈನಿಕ ಶಾಲೆಗಳ ಗುಂಪು- ಎಚ್ ವಿಭಾಗದ ಹಾಕಿ ಪಂದ್ಯಾವಳಿ-2025 ಶುಕ್ರವಾರ ಮುಕ್ತಾಯವಾಯಿತು.

ಕೇರಳದ ಸೈನಿಕ ಶಾಲೆ ಕಝಕೂಟಂ, ಆಂಧ್ರಪ್ರದೇಶದ ಸೈನಿಕ ಶಾಲೆ ಕಲಿಕಿರಿ, ತಮಿಳುನಾಡಿನ ಸೈನಿಕ ಶಾಲೆ ಅಮರಾವತಿನಗರ ಹಾಗೂ ಆತಿಥೇಯ ಕೊಡಗು ಸೈನಿಕ ಶಾಲೆಯ ತಂಡಗಳು ಭಾಗವಹಿಸಿದ್ದವು. ಬಾಲಕರ ಜೂನಿಯರ್, ಬಾಲಕರ ಸಬ್ ಜೂನಿಯರ್ ಹಾಗೂ ಬಾಲಕಿಯರ ಜೂನಿಯರ್ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.

ಕ್ರೀಡಾಕೂಟವನ್ನು ಶಾಲೆಯ ಪ್ರಭಾರ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ತಂಡಗಳು ಆಕರ್ಷಕ ಪಥಸಂಚನ ನಡೆಸಿದವು. ನಂತರ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಈ ವೇಳೆ ಮಾತನಾಡಿದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಕ್ರೀಡಾಪಟುಗಳ ಶಿಸ್ತು, ಕ್ರೀಡಾಸ್ಫೂರ್ತಿ ಮತ್ತು ಉತ್ಸಾಹ ಪ್ರಶಂಸಿಸಿದರು. ಈ ಸ್ಪರ್ಧೆ ಕ್ರೀಡಾಸ್ಪೂರ್ತಿ ಹಾಗೂ ಸಾಂಘಿಕ ಹೋರಾಟದಿಂದ, ಆರೋಗ್ಯಯುತ ಮನಸ್ಸಿನೊಂದಿಗೆ ಕೂಡಿರಬೇಕು. ಇದರೊಂದಿಗೆ ಸ್ಪರ್ಧಾಳುಗಳು ತಮ್ಮೆಲ್ಲ ಸ್ಪರ್ಧೆಗಳಲ್ಲಿ ಸ್ನೇಹಪೂರ್ವಕವಾದ ಹಾಗೂ ನ್ಯಾಯಯುತವಾದ ಆಟದ ಮೌಲ್ಯಗಳನ್ನು ಪಾಲಿಸಬೇಕು ಎಂದರು.

ಶುಕ್ರವಾರ (ಜೂ.13) ಪಂದ್ಯಾವಳಿಯ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಶಾಲೆಯ ಮತ್ತೊಬ್ಬ ಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಪಿ.ಪ್ರಕಾಶ್‌ರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ವಿಜೇತ ತಂಡಗಳಿಗೆ ಪಾರಿತೋಷಕ, ಪದಕ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರಲ್ಲದೆ, ಆಟಗಾರರ ಆತ್ಮವಿಶ್ವಾಸ, ಕ್ರೀಡಾ ಮನೋಭಾವ ಮತ್ತು ಸಾಂಘಿಕ ಹೋರಾಟದ ಪ್ರದರ್ಶನಕ್ಕೆ ತಮ್ಮ ಶ್ಲಾಘನೆ ವ್ಯಕ್ತಪಡಿಸಿದರು. ಇದರೊಂದಿಗೆ ಅತ್ಯುತ್ತಮ ಆಟಗಾರರು ಮತ್ತು ಗೋಲ್ ಕೀಪರ್‌ಗಳ ಅದ್ಭುತ ಪ್ರದರ್ಶನ ಪ್ರಶಂಸಿಸಿದರು. ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದ ಕ್ರೀಡಾ ಶಾಲೆ ಹಾಗೂ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ಸೈನಿಕ ಶಾಲೆಗಳ ಮೇಲ್ವಿಚಾರಕರು, ಶಾಲೆಯ ಎನ್‌ಸಿಸಿ ಸಿಬ್ಬಂದಿ ವರ್ಗ, ದೈಹಿಕ ಶಿಕ್ಷಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.

ಈ ಪಂದ್ಯಾವಳಿಯಲ್ಲಿ ಜೂನಿಯರ್ ವಿಭಾಗದಿಂದ ಸೈನಿಕ ಶಾಲೆ ಕಝಕೂಟಂ, ಸಬ್ ಜೂನಿಯರ್ ವಿಭಾಗದಿಂದ ಸೈನಿಕ ಶಾಲೆ ಅಮರಾವತಿನಗರ ಹಾಗೂ ಬಾಲಕಿಯರ ಜೂನಿಯರ್ ವಿಭಾಗದಿಂದ ಸೈನಿಕ ಶಾಲೆ ಕಲಿಕಿರಿ ಪ್ರಥಮ ಸ್ಥಾನವನ್ನು ಪಡೆದವು. ಆತಿಥೇಯ ಕೊಡಗು ಸೈನಿಕ ಶಾಲೆ ಉತ್ತಮ ಪ್ರದರ್ಶನ ನೀಡಿ ಎರಡನೇ ಸ್ಥಾನ ತನ್ನದಾಗಿಸಿಕೊಂಡಿತು. ಈ ಮೂಲಕ ಕಳೆದ ವರ್ಷಕ್ಕಿಂದ ಉತ್ತಮ ಸಾಧನೆ ಪ್ರದರ್ಶಿಸಿತು.