ಮಡಿಕೇರಿ: ಕ್ರೀಡಾಪಟುಗಳು ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಮತೋಲನದಿಂದ ತೊಡಗಿಸಿಕೊಳ್ಳಬೇಕು ಎಂದು ಅರ್ಜುನ ಪ್ರಶಸ್ತಿ ವಿಜೇತ ಮತ್ತು ಹಾಕಿ ಕ್ರೀಡಾಪಟು ಎಸ್.ವಿ.ಸುನಿಲ್ ಕಿವಿಮಾತು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ, ಬಾಲಕ, ಬಾಲಕಿಯರ ಹಾಕಿ ಪಂದ್ಯಾವಳಿಗೆ ಎಸ್.ವಿ.ಸುನಿಲ್, ಅಂತರರಾಷ್ಟ್ರೀಯ ಹಾಕಿ ಕ್ರೀಡಾಪಟು ವಿ.ಎಸ್.ವಿನಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪರವರು ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಎಸ್.ವಿ.ಸುನಿಲ್, ಕ್ರೀಡಾಪಟುಗಳು ಜಿಲ್ಲಾ, ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸುವಂತಾಗಬೇಕು. ಕ್ರೀಡಾಪಟುಗಳು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ಕ್ರೀಡಾಪಟುಗಳು ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಮತೋಲನದಿಂದ ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ ಅವರು, ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಪ್ರಯತ್ನ ಇರಬೇಕು ಎಂದು ಹೇಳಿದರು.
ಅಂತರರಾಷ್ಟ್ರೀಯ ಹಾಕಿ ಕ್ರೀಡಾಪಟು ವಿ.ಎಸ್.ವಿನಯ್ ಮಾತನಾಡಿ, ಯಾವುದೇ ಕ್ರೀಡಾಪಟು, ತಾಲೂಕು, ಜಿಲ್ಲಾ, ರಾಜ್ಯ, ದೇಶ ಹೀಗೆ ಹಂತ ಹಂತವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಮುಂದಾಗಬೇಕು. ಕ್ರೀಡೆಯಲ್ಲಿ ಸತತ ಪರಿಶ್ರಮವಿದ್ದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದೆ ಹಾಕಿ ಕ್ರೀಡೆಯಲ್ಲಿ ಕೊಡಗು ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದಿಂದ ಹಾಕಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದೇ ಕಡಿಮೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆ ಹಾಗೂ ರಾಜ್ಯದವರು ಭಾರತವನ್ನು ಪ್ರತಿನಿಧಿಸುವಂತಾಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಮಾತನಾಡಿ, ಕ್ರೀಡಾಪಟುಗಳು ತಂಡವಾಗಿ ಆಟವಾಡಬೇಕು. ಶಿಕ್ಷಕರು, ಪಾಲಕರ ಕನಸನ್ನು ನನಸು ಮಾಡುವಂತಾಗಬೇಕು ಎಂದರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಪಾಲ್ಗೊಳ್ಳುವುದು ಅತೀ ಮುಖ್ಯ. ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಮೈಸೂರು ವಿಭಾಗದ ಜಂಟಿ ನಿರ್ದೇಶಕರ ಕಚೇರಿಯ ದೈಹಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ವೆಂಕಟೇಶ್ ಮೂರ್ತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ನಗರಸಭಾ ಸದಸ್ಯ ಎಸ್.ಸಿ.ಸತೀಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವಯ್ಯ ಪಲ್ಲೇದ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಪಿ.ಕೆ.ನಳಿನಿ ಇತರರು ಇದ್ದರು.