ಮೂಲ್ಕಿ: ಅಕ್ರಮ ಮರಳು ಸಾಗಾಟದಿಂದ ಕಾಂಕ್ರೀಟ್ ರಸ್ತೆ ನಾಶ, ಪೊಲೀಸ್ ಬೀಟ್ ವ್ಯವಸ್ಥೆ ಸ್ಥಗಿತ, ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದರೂ ಯಾವುದೇ ಕ್ರಮ ಇಲ್ಲ, ಗ್ರಾಮದಲ್ಲಿ 9/11 ಸಮಸ್ಯೆ, ಕೃಷಿ ಇಲಾಖೆಯಿಂದ ಅನುದಾನ ವಿತರಣೆಯಲ್ಲಿ ತಾರತಮ್ಯ, ಪಂಚಾಯಿತಿ ವ್ಯಾಪ್ತಿಯ 9ಎಕರೆ ಗೋಮಾಳ ಜಾಗದ ಬಗ್ಗೆ ಏನಾಯ್ತು?, ಕೆಆರ್‌ಡಿಸಿಎಲ್ ವತಿಯಿಂದ ನಿರ್ಮಾಣಗೊಂಡ ಮಟ್ಟು ರಸ್ತೆ ಕಳಪೆ ಮುಂತಾದ ದೂರು ಆಕ್ರೋಶಗಳೊಂದಿಗೆ ಅತಿಕಾರಿಬೆಟ್ಟು ಗ್ರಾ.ಪಂ. ವ್ಯಾಪ್ತಿಯ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆಯಿತು.
ಸಭೆ ಆರಂಭದಲ್ಲಿ ಗ್ರಾಮ ಸಭೆಗೆ ಗೈರಾದ ವಿವಿಧ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವಿನಾಶದ ಅಂಚಿನಲ್ಲಿ ರಸ್ತೆ: ಮೂಲ್ಕಿ ಹೆದ್ದಾರಿಯಿಂದ ಮಟ್ಟು ಮೂಲಕ ಉಡುಪಿ ಜಿಲ್ಲೆಗೆ ಹಾಗೂ ಏಳಿಂಜೆ, ಐಕಳ ಮತ್ತಿತರ ಕಡೆಗಳಿಂದ ಮೈಲೊಟ್ಟು ಮೂಲಕ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದ್ದು, ರಸ್ತೆಗಳು ವಿನಾಶದ ಅಂಚಿನಲ್ಲಿದೆ. ಈ ಬಗ್ಗೆ ಗಣಿ, ಭೂ ವಿಜ್ಞಾನ, ಕಂದಾಯ ಅಧಿಕಾರಿ, ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಅವರ ಜತೆ ಶಾಮಿಲಾಗಿದ್ದಾರೆ ಎಂದು ಗ್ರಾಮಸ್ಥ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ವಿರುದ್ಧ ಆಕ್ರೋಶ: ಪಂಚಾಯಿತಿ ವ್ಯಾಪ್ತಿಯಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಸ್ಥಗಿತಗೊಂಡಿದೆ ಎಂದು ಗ್ರಾಮಸ್ಥ ದಿನೇಶ್ಚಂದ್ರ ಆಜಿಲ ಹೇಳಿದಾಗ ಧ್ವನಿ ಕೂಡಿಸಿದ ಗ್ರಾಮಸ್ಥರು ಮಟ್ಟು ಗ್ರಾಮದಲ್ಲಿ ಸಣ್ಣಪುಟ್ಟ ಕಳ್ಳತನಗಳು ಹೆಚ್ಚುತ್ತಿದ್ದು, ಕಳ್ಳತನ ಮಾಡಿದ ಆರೋಪಿಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
9/11 ಸಮಸ್ಯೆ: ಪಂಚಾಯಿತಿ ಉಪಾಧ್ಯಕ್ಷ ಮನೋಹರ ಕೋಟ್ಯಾನ್ ಮಾತನಾಡಿ, ಗ್ರಾಮದಲ್ಲಿ 9/11 ಸಮಸ್ಯೆ ಬಹಳಷ್ಟು ಇದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಡತಗಳು ಕಂದಾಯ ಇಲಾಖೆಯಲ್ಲಿ ಕೊಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯಿಂದ ಬೇಕಾದವರಿಗೆ ಮಾತ್ರ ಟಾರ್ಪಲ್ ವಿತರಿಸಲಾಗುತ್ತಿದ್ದು, ತಾರತಮ್ಯ ಮಾಡಲಾಗುತ್ತಿದೆ. ಬಡವರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಗ್ರಾಮಸ್ಥ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಕೆಆರ್‌ಡಿಸಿಎಲ್ ವತಿಯಿಂದ ನಿರ್ಮಾಣಗೊಂಡ ಮಟ್ಟು ರಸ್ತೆ ಕಳಪೆ ಕಾಮಗಾರಿಯಾಗಿದ್ದು, ಕಾಂಕ್ರೀಟ್ ಅಲ್ಲಲ್ಲಿ ಬಿರುಕು ಬಿಟ್ಟು ಹೊಂಡಮಯವಾಗಿದೆ. ಸರಿಪಡಿಸಲು ಗುತ್ತಿಗೆದಾರರಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥ ಉದಯ ಅಮೀನ್ ದೂರಿದರು.
ಕೊಲಕಾಡಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಪ್ರಸ್ತಾಪಿಸಿದ ಸಾಧು ಅಂಚನ್ ಮಾತನಾಡಿ, ಕನ್ನಡ ಶಾಲೆಗಳ ಉಳಿವಿಗೆ ಪ್ರಯತ್ನಿಸಬೇಕಾಗಿದೆ ಎಂದರು. ನೋಡಲ್ ಅಧಿಕಾರಿಯಾಗಿ ಮಂಗಳೂರು ತನಿಖಾ ಸಹಾಯಕ ಲಿಂಗರಾಜು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.
ಪಂಚಾಯಿತಿ ಸದಸ್ಯರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ
ಸಭೆಯಲ್ಲಿ ಅತಿಕಾರಿಬೆಟ್ಟು ಪಾದೆ ಬಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ, ಮಟ್ಟು ಗ್ರಾಮದಲ್ಲಿ ವಿದ್ಯುತ್ ಕಂಬಕ್ಕೆ ತಾಗಿಕೊಂಡಿರುವ ಅಪಾಯಕಾರಿ ಮರಗಳ ತೆರವು, ಶಿಮಂತೂರು ರಕ್ತೇಶ್ವರಿ ಗುಡಿಯ ಬಳಿ ಖಾಸಗಿ ಅವರು ಅತಿಕ್ರಮಣ ಮಾಡಿಕೊಂಡ ಜಾಗ ತೆರವು ಮಾಡಲು ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ, ಪಂಚಾಯಿತಿ ವ್ಯಾಪ್ತಿಯ 9ಎಕರೆ ಗೋಮಾಳ ಜಾಗದ ಬಗ್ಗೆ ಏನಾಯ್ತು?, ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ನಿಯಂತ್ರಿಸಲು ಪಂಚಾಯಿತಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಹವಾಲು ಮಂಡಿಸಿದರು.