ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತದಿಂದ ಸಾವಿಗೀಡಾದವರ ಸಂಖ್ಯೆಯನ್ನು ಪರಿಶೀಲಿಸಿದಾಗ ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು ಹೃದಯ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗುವ ಸಾಧ್ಯತೆ ಹೊಸ ವಿಷಯವೇನಲ್ಲ ಎಂದು ವೈದ್ಯರು ಹೇಳುತ್ತಾರೆ.
ಹಾಸನ ಜಿಲ್ಲೆಯಲ್ಲಿನ ಸಾವುಗಳ ವಿಚಾರವಾಗಿ ತನಿಖೆ ನಡೆಸಿದ ತಜ್ಞರ ಸಮಿತಿಯ ನೇತೃತ್ವ ವಹಿಸಿದ್ದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಕೆ.ಎಸ್. ರವೀಂದ್ರನಾಥ್, ಹಾಸನದಲ್ಲಿ ಮೃತಪಟ್ಟ 24 ಜನರಲ್ಲಿ ಆರು (ಶೇ. 25) ಆಟೋ ಮತ್ತು ಕ್ಯಾಬ್ ಚಾಲಕರು ಕಂಡು ಬಂದಿರುವುದು ಆಶ್ಚರ್ಯವೇನಲ್ಲ ಮತ್ತು ಹಿಂದಿನ ಅಧ್ಯಯನಗಳಿಂದಲೂ ಇದನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಯದೇವದಲ್ಲಿ 2017 ರಿಂದ ನಿರ್ವಹಿಸಲಾದ ಅಕಾಲಿಕ ಪರಿಧಮನಿ ಕಾಯಿಲೆ (ಕ್ಟೃಛಿಞಠ್ಠ್ಟಿಛಿ ಇಟ್ಟಟ್ಞಚ್ಟ ಅ್ಟಠಿಛ್ಟಿ ಈಜಿಛಿಛಿ) ನೋಂದಣಿಯ ದತ್ತಾಂಶದ ಪ್ರಕಾರ, ಇಲ್ಲಿಯವರೆಗೆ ಪರೀಕ್ಷಿಸಲ್ಪಟ್ಟ 4,020 ಯುವ ಹೃದಯಾಘಾತ ರೋಗಿಗಳಲ್ಲಿ (40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) 975 (ಶೇ. 24.25) ಜನರು ಬಹು ಅಪಾಯಕಾರಿ ಅಂಶಗಳನ್ನು ಹೊಂದಿರುವ ಚಾಲಕರಾಗಿದ್ದಾರೆ. ಇವರಲ್ಲಿ ಶೇ.72.9 ಮಂದಿ ಧೂಮಪಾನಿಗಳಾಗಿದ್ದರೆ, ಶೇ. 7.10 ಮಧುಮೇಹ, ಶೇ. 8.3 ಅಧಿಕ ರಕ್ತದೊತ್ತಡ, ಶೇ. 10.5 ಬೊಜ್ಜು ಹೊಂದಿದ್ದಾರೆ. ಉಳಿದ ಶೇ.13.7 ಮಂದಿ ಹೃದಯ ಸಂಬಂಧಿ ಕಾಯಿಲೆಗಳ ಕುಟುಂಬದ ಇತಿಹಾಸ ಹೊಂದಿದ್ದವರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರಣಗಳು: ಒತ್ತಡ ಮತ್ತು ಜೀವನಶೈಲಿ ಜತೆಗೆ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯಕ್ಕೆ ದೀರ್ಘ ಸಮಯ ಒಡ್ಡಿಕೊಳ್ಳುವುದು, ಸಂಚಾರ ದಟ್ಟಣೆಯಿಂದಾಗಿ ವಾಹನ ಚಲಾಯಿಸುವಾಗ ಒತ್ತಡಕ್ಕೆ ಒಳಗಾಗುವುದು, ದೀರ್ಘ ಕೆಲಸದ ಸಮಯ ಮತ್ತು ದೀರ್ಘಕಾಲ ಕುಳಿತುಕೊಳ್ಳುವುದು, ಹೆಚ್ಚಾಗಿ ಹೊರಗಿನ ಅದರಲ್ಲೂ ರಸ್ತೆ ಬದಿ ಆಹಾರ ಸೇವನೆ. ಅನಿಯಮಿತ ಆಹಾರ ಪದ್ಧತಿ, ಅನಿಯಮಿತ ನಿದ್ರೆ, ಇವುಗಳ ಜತೆಗೆ ಹೆಚ್ಚಿನ ಧೂಮಪಾನ ಮತ್ತು ಮದ್ಯಪಾನ ಇವು ಹೃದಯ ಸಮಸ್ಯೆ ಹೆಚ್ಚಿಸುತ್ತವೆ ಎಂದು ರವೀಂದ್ರನಾಥ್ ಹೇಳಿದರು.
ಬಸ್ ಚಾಲಕರು:
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಚಾಲಕರಲ್ಲಿ ಇದೇ ರೀತಿಯ ಪ್ರವೃತ್ತಿಗಳು ಕಂಡುಬಂದಿದ್ದು, 2022 ರಿಂದ ಬ್ಯಾಚ್‌ಗಳಲ್ಲಿ ಸಂಸ್ಥೆಯಲ್ಲಿನ ಸಿಬ್ಬಂದಿಯನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿದೆ. 2022ರ ಆಗಸ್ಟ್ 10ರಿಂದ ಸಂಸ್ಥೆಯಲ್ಲಿ ಮೌಲ್ಯಮಾಪನಕ್ಕೆ ಒಳಗಾದ 7,635 ಉದ್ಯೋಗಿಗಳಲ್ಲಿ 45-60 ವರ್ಷ ವಯಸ್ಸಿನ ಚಾಲಕರು ಅವರಲ್ಲಿ ಶೇ. 40 ಅಧಿಕ ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗಿದ್ದು. ಶೇ. 4 ಮಂದಿ ಗಂಭೀರ ಹೃದಯ ಕಾಯಿಲೆ ಹೊಂದಿದವರಾಗಿದ್ದಾರೆ.
ಪರೀಕ್ಷೆಗೆ ಒಳಗಾದ ಚಾಲಕರಲ್ಲಿ ಶೇ. 27 ಮಧುಮೇಹ, ಶೇ. 25 ಅಧಿಕ ರಕ್ತದೊತ್ತಡ, ಶೇ. 62 ಬೊಜ್ಜು ಮತ್ತು ಶೇ. 1 ಮಂದಿ ಕೌಟುಂಬಿಕ ಹಿನ್ನೆಲೆಯನ್ನು ಹೊಂದಿದ್ದರು ಎಂದು ಜಯದೇವ ಸಂಸ್ಥೆ ನಡೆಸಿದ ವಿಶ್ಲೇಷಣೆಯ ದತ್ತಾಂಶ ಹೇಳುತ್ತದೆ. ಇವರಲ್ಲಿ ಶೇ. 22 ಧೂಮಪಾನಿಗಳಾಗಿದ್ದು, ಶೇ. 25 ಮದ್ಯ ಸೇವಿಸುತ್ತಿದ್ದವರಾಗಿದ್ದಾರೆ.
ಕೋಟ್ - 1
ಆಟೋ ಮತ್ತು ಕ್ಯಾಬ್ ಚಾಲಕರಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು. ಈ ಸಂಬಂಧ ಚಾಲಕರ ಸಂಘದೊಂದಿಗೆ ಚರ್ಚಿಸಿ ಹೃದಯ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗುವುದು.
- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಕೋಟ್ - 2
ಹೃದಯ ಅಪಾಯಗಳನ್ನು ತಡೆಯಲು ವಾರ್ಷಿಕ ಆರೋಗ್ಯ ತಪಾಸಣೆಯ ಅಗತ್ಯವಿದ್ದು, ಇದರಿಂದ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಜತೆಗೆ ಜನರು ವ್ಯಾಯಾಮ, ಉತ್ತಮ ಆಹಾರ ಮತ್ತು ನಿದ್ರೆ ಸೇರಿ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು.
- ಡಾ. ಕೆ.ಎಸ್. ರವೀಂದ್ರನಾಥ್, ನಿರ್ದೇಶಕರು, ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ