ರವಿ ಗೋಸಾವಿ ಬೆಳಗಾವಿ
ಕೃಷ್ಣೆಯ ಮಡಿಲಲ್ಲಿಯೇ ನೀರಾವರಿ ಯೋಜನೆಗಳ ಜಪದಲ್ಲಿರುವ ಅಥಣಿ ವಿಧಾನಸಭೆ ಕ್ಷೇತ್ರ ಈ ಬಾರಿಯೂ ಪಕ್ಷಾಂತರ ರಾಜಕಾರಣದಿಂದಲೇ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಘಟಾನುಘಟಿ ನಾಯಕರ ನಡುವಿನ ಜಿದ್ದಾಜಿದ್ದಿಯಿಂದಲೇ ರಾಜ್ಯದ ಗಮನಸೆಳೆಯುತ್ತಿರುವ ಅಥಣಿ ರಣಕಣದಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿನ ಅಭ್ಯರ್ಥಿಗಳೇ ಈಗಲೂ ಎದುರಾಳಿಗಳಾಗಿದ್ದು, ಪ್ರತಿನಿಧಿಸುವ ಪಕ್ಷಗಳು ಮಾತ್ರ ಬದಲಾಗಿವೆ. ಈ ಅದಲು-ಬದಲಿನ ನಡುವೆಯೂ ನಡೆದಿರುವ ಸಮಬಲದ ಹೋರಾಟ ಇದೀಗ ಮತ್ತಷ್ಟು ರೋಚಕಗೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಹಾಗೂ ಬಿಜೆಪಿಯ ಮಹೇಶ ಕುಮಠಳ್ಳಿ ನಡುವೆ ನೇರಾನೇರ ಹಣಾಹಣಿ ನಡೆಯುತ್ತಿದ್ದೆ. ಕ್ಷೇತ್ರದಲ್ಲಿನ ಬಹುತೇಕ ಪಿಕೆಪಿಎಸ್‌ಗಳನ್ನು ಬಲವರ್ಧನೆಗೊಳಿಸಿದ್ದರಿಂದ ಸಹಕಾರಿ ರಂಗವು ಸವದಿ ಕೈಗೆ ಬಲ ತುಂಬಲಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಬಿಜೆಪಿಯ ಕುಮಠಳ್ಳಿ ಗೆಲುವಿಗೆ ಹಿಂದು ಪರ ಸಂಘಟನೆ ಹಾಗೂ ರಮೇಶ ಜಾರಕಿಹೊಳಿ ಅವರ ಪ್ರಭಾವ ಪರಿಣಾಮಕಾರಿಯಾಗಲಿದೆ ಎಂಬ ಲೆಕ್ಕಾಚಾರ ಜೋರಾಗಿದೆ.
ಕ್ಷೇತ್ರವು ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಿಕೊಂಡು ಬಹುದೊಡ್ಡ ಕಾರ್ಯಕರ್ತರ ಪಡೆ ಹೊಂದಿದ್ದರೂ 2018ರ ವಿಧಾನಸಭೆ ಚುನಾವಣೆಯಲ್ಲಿ ಸವದಿ ಸೋತಿದ್ದರು. ಆದರೂ, ಉಪ ಮುಖ್ಯಮಂತ್ರಿ ಹುದ್ದೆ ನೀಡಿ, ವಿಧಾನ ಪರಿಷತ್ ಪ್ರವೇಶಿಸುವಂತೆ ಮಾಡಿದ್ದ ಬಿಜೆಪಿ ಹೈಕಮಾಂಡ್‌ನ್ನೇ ಧಿಕ್ಕರಿಸಿ ಕಾಂಗ್ರೆಸ್ ಸೇರಿರುವ ಸವದಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ವ್ಯಕ್ತಿ ನಿಷ್ಠವಾಗಿದ್ದ ಹಲವರು ಸವದಿ ಕೈ ಬಲ ಪಡಿಸಲು ಕಾಂಗ್ರೆಸ್ ಸೇರಿದ್ದು, ಇತ್ತ ಸಂಘಪರಿವಾರದ ಗೆರೆ ದಾಟಿದ ಲಕ್ಷ್ಮಣಗೆ ಸೋಲಿನ ಬರೆ ನೀಡಲು ಕ್ಷೇತ್ರದಲ್ಲಿ ಆರೆಸ್ಸೆಸ್ಸ್ ಸಹ ಸಕ್ರಿಯಗೊಂಡಿದೆ. ಮತ್ತೊಂದೆಡೆ ಕುಮಠಳ್ಳಿ ಬೆನ್ನಿಗೆ ನಿಂತಿರುವ ರಮೇಶ ಜಾರಕಿಹೊಳಿ ಕಾಂಗ್ರೆಸ್‌ನಿಂದ ನೂರಾರು ಕಾರ್ಯಕರ್ತರನ್ನು ಬಿಜೆಪಿಗೆ ಕರೆತಂದು ಹೆಣೆಯುತ್ತಿರುವ ತಂತ್ರ-ಪ್ರತಿತಂತ್ರ ಗುಟ್ಟಾಗಿ ಉಳಿದಿಲ್ಲ.
ಪಕ್ಷಾಂತರದಿಂದಲೇ ಸದ್ದುಮಾಡುತ್ತಿರುವ ಈ ಕ್ಷೇತ್ರದಲ್ಲಿ ಉಭಯ ಪಕ್ಷದ ವಲಯವು ಪಕ್ಷ ನಿಷ್ಠೆಯ ವಾಗ್ಬಾನ ಹೂಡುತ್ತಲೆ ಇದೆ. ಇಷ್ಟು ವರ್ಷ ದ್ವೇಷಿಸಿದವರನ್ನೇ ಒಪ್ಪಿಕೊಳ್ಳುವ ಅನಿವಾರ್ಯತೆ ಕಾರ್ಯಕರ್ತರಲ್ಲಿ ಮೂಡಿದ್ದು, ಒಳ ಬೇಗುದಿ ಕಾಂಗ್ರೆಸ್‌ನಲ್ಲಿ ತುಸು ಹೆಚ್ಚೇ ಎನ್ನುವಂತಿದೆ. ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿಗಿಂತ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ನಡುವೆಯೇ ವಾಕ್ಯುದ್ದ ನಡೆಯುತ್ತಿರುವುದು ಗಮನಾರ್ಹ.
ದಿನದಿಂದ ದಿನಕ್ಕೆ ರಂಗೇರುತ್ತಿರುವ ರಣಕಣದಲ್ಲಿ ಜಾತಿ, ಧರ್ಮಧಾರಿತ ಮತಗಳ ಲೆಕ್ಕಾಚಾರವೂ ಭರದಿಂದ ನಡೆಯುತ್ತಿದ್ದು, ಕ್ಷೇತ್ರದಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚಿದೆ. ಜೈನರು, ಕುರುಬರು, ಮಸ್ಲೀಮರೂ ನಿರ್ಣಾಯಕ ಸ್ಥಾನದಲ್ಲಿದ್ದು, ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯದ ಕುಮಠಳ್ಳಿ ಎದುರು ಗಾಣಿಗ ಸಮಾಜದ ಲಕ್ಷ್ಮಣ ಸವದಿ ಜಾತಿ ಬಲ ಕಡಿಮೆ. ಆದರೂ, ಸಹಕಾರಿ ಕ್ಷೇತ್ರ ಹಾಗೂ ಕಾಂಗ್ರೆಸ್‌ನ ಸಾಂಪ್ರದಾಯಿಕ ಅಹಿಂದ ಮತಗಳು ಕೈ ಹಿಡಿಯುವ ಸಾಧ್ಯತೆ ಇದ್ದು, ಪ್ರಜಾಪ್ರಭುತ್ವದ ಪ್ರಭುಗಳು ಯಾರಿಗೆ ಮಣೆ ಹಾಕಿ ಯಾರನ್ನ ಮಣಿಸಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.
2.23 ಲಕ್ಷ ಮತದಾರರು:
ಈ ಇಬ್ಬರನ್ನೂ ಹೊರತುಪಡಿಸಿ ಜೆಡಿಎಸ್ ಪಕ್ಷದಿಂದ ಶಶಿಕಾಂತ ಪಡಸಲಗಿ, ಆಮ್ ಆದ್ಮಿ ಪಕ್ಷದಿಂದ ಸಂಪತ ಕುಮಾರ್ ಶೆಟ್ಟಿ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಸವರಾಜ ಬಿಸನಕೊಪ್ಪ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಥಣಿ ಮತಕ್ಷೇತ್ರದಲ್ಲಿ 1,14,201 ಪುರುಷ ಹಾಗೂ 1,08,881 ಮಹಿಳಾ ಮತದಾರರು ಹಾಗೂ ಇತರೆ 6 ಜನ ಸೇರಿದಂತೆ ಒಟ್ಟು 2,23,088 ಮತದಾರರಿದ್ದಾರೆ.
ದಿಕ್ಕು ಬದಲಿಸಿದ ಉಪ ಚುನಾವಣೆ
2004 ರಿಂದ 2018ರವರೆಗೆ ಸತತವಾಗಿ ಮೂರು ಅವಧಿಯ ಹ್ಯಾಟ್ರಿಕ್‌ನಂತೆ 15 ವರ್ಷಗಳ ಕಾಲ ಸುದೀರ್ಘವಾಗಿ ಲಕ್ಷ್ಮಣ ಸವದಿ ಬಿಜೆಪಿಯಿಂದಲೇ ಆಯ್ಕೆಯಾಗಿರುವುದು ಗಮನಾರ್ಹ. ಸದ್ಯದ ಎದುರಾಳಿಯಾಗಿರುವ ಮಹೇಶ ಕುಮಠಳ್ಳಿ ಸವದಿಯ ಗೆಲುವಿನ ನಾಗಾಲೋಟಕ್ಕೆ ಬ್ರೆಕ್ ಹಾಕಿದ್ದರು. ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಮಹೇಶ ಕುಮಠಳ್ಳಿ ವಿರುದ್ಧ ಲಕ್ಷ್ಮಣ ಸವದಿ ಕೇವಲ 2,331 ಮತಗಳಿಂದ ಪರಾಬವಗೊಂಡಿದ್ದರು. ಆದರೆ, ರಾಜಕೀಯ ಬದಲಾವಣೆಯಿಂದ ಮಹೇಶ ಕುಮಠಳ್ಳಿ 2019 ರಲ್ಲಿ ಬಿಜೆಪಿ ಸೇರಿಕೊಂಡು ಅಂದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಗಜಾನನ ಮಂಗಸೂಳಿ ವಿರುದ್ಧ 39,989 ಮತಗಳ ಅಂತರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಲ್ಲದೇ, ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ಹೀಗಾಗಿಯೇ ಈ ಬಾರಿ ಕುಮಠಳ್ಳಿಗೆ ಬಜೆಪಿ ಟಿಕೆಟ್ ಲಭಿಸಿದ್ದು, ಮುನಿಸಿಗೊಂಡ ಸವದಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ.
more