ಜಿಲ್ಲೆ

ನವಭಾರತದ ಬೀಜ ಬಿತ್ತಿದ ಅಟಲ್: ವಿಜಯೇಂದ್ರ

ಬೆಂಗಳೂರು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಕಂಡಿದ್ದ ನವಭಾರತದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ನನಸು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸುಶಾಸನ ದಿನಾಚರಣೆಯಲ್ಲಿ ‘ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆಯ ಲೋಗೋ’ ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರ ರಹಿತ ಆಡಳಿತ, ಉತ್ತಮ ವಿದೇಶಾಂಗ ನೀತಿಯನ್ನು ಒಳಗೊಂಡಂತೆ ಭಾರತವು ಅಭಿವೃದ್ದಿ ದೇಶಗಳ ಸಾಲಿನಲ್ಲಿ ನಿಲ್ಲಬೇಕೆಂಬ ನವಭಾರತದ ಬೀಜವನ್ನು ವಾಜಪೇಯಿ ಬಿತ್ತಿದ್ದರು. ಆ ಬೀಜವು ಇಂದು ಮೊಳಕೆಯೊಡೆದಿದೆ ಎಂದು ಹೇಳಿದರು.

ರಾಜಕಾರಣಿಯು ಯಾವಾಗಲೂ ಚುನಾವಣೆ ಬಗ್ಗೆ ಯೋಚಿಸುತ್ತಾನೆ. ಅದೇ ನಾಯಕನಾದವನು ದೇಶದ ಭವಿಷ್ಯದ ಬಗ್ಗೆ ಯೋಚಿಸುತ್ತಾನೆ. ಅಂದು ವಾಜಪೇಯಿ ಅವರ ದೂರದೃಷ್ಟಿ ಯೋಜನೆಗಳು ಇಂದು ಲಪ್ರದವಾಗಿವೆ. 10-20 ವರ್ಷಗಳ ಹಿಂದಿಗೂ ಮತ್ತು ಪ್ರಸ್ತುತಕ್ಕೂ ಭಾರತೀಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಇಂದು ಜಗತ್ತು ಭಾರತದ ಕಡೆ ನೋಡುತ್ತಿದೆ ಎಂದರು.

ಸಾಮಾನ್ಯ ಜನರಿಗೆ ಮತ್ತು ಪ್ರಜ್ಞಾವಂತರಿಗೆ ಅವಶ್ಯವಿರುವ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ಅಸಾಧ್ಯ ಎಂಬ ಮನಸ್ಥಿತಿ ಇತ್ತು. ಅದನ್ನು ಮೋದಿ ಸರ್ಕಾರವು ನಮ್ಮಲ್ಲಿನ ಭ್ರಮೆ ಮತ್ತು ಮನಸ್ಥಿತಿಯನ್ನು ಬದಲಿಸಿತು ಎಂದು ಹೇಳಿದರು.