ಕೋಲಾರ: ಕೇಂದ್ರ ಸರ್ಕಾರದ ಅಟಲ್‌ಭೂ ಜಲ್ ಯೋಜನೆಯಡಿ ಕೋಲಾರ ಲೋಕಸಭಾ ಕ್ಷೇತ್ರದ ಎಲ್ಲ ತಾಲೂಕು ಒಳಗೊಂಡಿದ್ದು, ಯೋಜನೆ ಬಗ್ಗೆ ಅಧಿಕಾರಿಗಳು ರೈತರಿಗೆ ಸಂಪೂರ್ಣ ಅರಿವು ಮೂಡಿಸಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಅಂತರ್ಜಲ ನಿರ್ದೇಶನಾಲಯದಿಂದ ಶನಿವಾರ ಅಟಲ್ ಭೂ ಜಲ್ ಯೋಜನೆಯಡಿ ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಮಿತವ್ಯಯ ಬಳಕೆ, ಅಟಲ್ ಭೂ ಜಲ್ ಯೋಜನೆ ಅನುಷ್ಠಾನ ಮತ್ತು ಅಂತರ್ಜಲ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿ, ರೈತರ ಸಹಕಾರವಿಲ್ಲದೆ ಯಾವುದೇ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ರಾಜಕೀಯ ವ್ಯಕ್ತಿಗಳು ಶಿಫಾರಸು ಮಾಡಿದವರಿಗೆ ಸೌಲಭ್ಯ ಕಲ್ಪಿಸುವುದನ್ನು ಬಿಟ್ಟು ಅರ್ಹ ಫಲಾನುಭವಿಗಳಿಗೆ ಸೌಕರ್ಯ ತಲುಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಶ್ರೀನಿವಾಸಗೌಡ, ಅವಿಭಜಿತ ಜಿಲ್ಲೆಯಲ್ಲಿ 4840 ಕೆರೆಗಳಿದ್ದವು. ಅಂದು ಜನರೇ ಕಟ್ಟಿದ್ದ ಕೆರೆಗಳು ಇಂದು ಒತ್ತುವರಿಯಾಗಿವೆ. ಕೆಸಿ ವ್ಯಾಲಿ ನೀರು ಕಡೇಯ ಕೆರೆಗೆ ತಲುಪಿಲ್ಲ, ಆಗಲೇ ಕೆಲ ರೈತರು ಪೈಪ್ ಲೈನ್ ಅಳವಡಿಸಿ ನೀರು ಎತ್ತುತ್ತಿದ್ದಾರೆ. ಈ ಕೆಲಸಕ್ಕೆ ಯಾರೂ ಮುಂದಾಗಬಾರದು ಎಂದರು.
ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕ ಬಿ.ಟಿ.ಕಾಂತರಾಜು ಮಾತನಾಡಿ, ಕೇಂದ್ರ ಸರ್ಕಾರ ಅಟಲ್ ಭೂ ಜಲ್ ಯೋಜನೆಗೆ 7 ರಾಜ್ಯಗಳನ್ನು ಆಯ್ಕೆ ಮಾಡಿದ್ದು, ದಕ್ಷಿಣ ಭಾರತದಲ್ಲಿ ಕರ್ನಾಟಕ ಮಾತ್ರ ಸೇರ್ಪಡೆಯಾಗಿದೆ. ಯೋಜನೆ ಏ.1ರಿಂದ ಅನುಷ್ಠಾನಗೊಳ್ಳಲಿದೆ. ಯೋಜನೆಗೆ 6000 ಕೋಟಿ ರೂ.ಗಳಲ್ಲಿ ಕೇಂದ್ರ ಸರ್ಕಾರ 3000 ಕೋಟಿ ಹಾಗೂ 3000 ಕೋಟಿ ರೂ.ಗಳಿಗೆ ವಿಶ್ವಬ್ಯಾಂಕ್‌ನ ನೆರವು ಪಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಅಂತರ್ಜಲ ಅತಿ ಶೋಷಿತ 45 ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಯೋಜನೆಯಡಿ 1201.5 ಕೋಟಿ ರೂ.ನಿಗದಿಪಡಿಸಲಾಗಿದೆ. ಗ್ರಾಪಂನಿಂದ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಪಿಪಿಟಿ ಪ್ರಸಂಟೇಷನ್ ನೀಡಿದ ಜಿಕೆವಿಕೆ ನಿವೃತ್ತ ಸಂಶೋಧನಾ ನಿರ್ದೇಶಕ ಎಂ.ಎ.ಶಂಕರ್, ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳುದಂಧೆ ಜೀವಜಲ ಕುಸಿತಕ್ಕೆ ಪ್ರಮುಖ ಕಾರಣ. ಕೃಷಿ ಅರಣ್ಯಕ್ಕೆ ಒತ್ತು ನೀಡಿ, ಹೊಸ ಬೋರ್‌ವೆಲ್ ಬದಲು ಹಳೆ ಬೋರ್‌ವೆಲ್‌ಗಳಿಗೆ ಜಲಮರುಪೂರಣ ಮಾಡಿ, ಏಕ ಬೆಳೆಯ ಬದಲು ಬೆಳೆ ವೈವಿಧ್ಯತೆ ಅಳವಡಿಸಿಕೊಳ್ಳಿ ಎಂದರು.
ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಯಶೋಧ ಕೃಷ್ಣಮೂರ್ತಿ, ಸದಸ್ಯ ಕೃಷ್ಣಪ್ಪ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸುರೇಶ್‌ಕುಮಾರ್, ಭೂ ವಿಜ್ಞಾನಿ ಎ ತಿಪ್ಪೇಸ್ವಾಮಿ, ತೋಟಗಾರಿಕೆ ವಿವಿಯ ಡೀನ್ ಡಾ.ಬಿ.ಜಿ. ಪ್ರಕಾಶ್, ಪ್ರಾಧ್ಯಾಪಕ ಟಿ.ಬಿ. ಬಸವರಾಜು ಇತರರಿದ್ದರು.
ಉಸ್ತುವಾರಿ ಸಚಿವರು ಗರಂ: ಬೆಳಗ್ಗೆ 10.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಎಚ್.ನಾಗೇಶ್ ಸಕಾಲಕ್ಕೆ ಆಗಮಿಸಿದ್ದರು. ಆದರೆ ಕಾರ್ಯಕ್ರಮ ಆರಂಭವಾಗುವ ಸೂಚನೆ ಕಂಡುಬರಲಿಲ್ಲವಾದ್ದರಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನಂತರ ಸ್ವಕ್ಷೇತ್ರ ಮುಳಬಾಗಿಲಿಗೆ ತೆರಳಿದರು.