ವಿಜಯಪುರ: ಭಾರತ ಕಂಡ ಸರಳ ಸಜ್ಜನಿಕೆಯ ಅಪರೂಪದ ರಾಜಕಾರಣಿ ಅಜಾತಶತ್ರು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆ ಅಪಾರ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ. ಎಂ. ಶಿವಕುಮಾರ್ ಹೇಳಿದರು.
ಪಟ್ಟಣದ ಜಿಲ್ಲಾ ಕಸಾಪ ಕಚೇರಿಯಲ್ಲಿ ಶುಕ್ರವಾರ ಏರ್ಪಾಡಾಗಿದ್ದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ, ಪದ್ಮಶ್ರೀ ಸೂಲಗಿತ್ತಿ ನರಸಮ್ಮ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ಜಯಂತಿಯಲ್ಲಿ ಮಾನತಾಡಿದರು.
ದೇಶದ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡಿದ್ದ ವಾಜಪೇಯಿ ಅವರು ರಸ್ತೆಗಳು ಅಭಿವೃದ್ಧಿ ಆಗದೆ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಹೇಳುತ್ತಿದ್ದರು. ಆದ್ದರಿಂದಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಸುವರ್ಣ ಚತುಷ್ಪಥ ಯೋಜನೆ ಜಾರಿಗೆ ತಂದರು ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಬಿ. ಹಡಪದ್ ಮಾತನಾಡಿ, ಪದ್ಮಶ್ರೀ ಸೂಲಗಿತ್ತಿ ನರಸಮ್ಮ ಅವರು ಗರ್ಭದಲ್ಲಿರುವ ಮಗುವಿನ ನಾಡಿಬಡಿತ ಅರಿಯುತ್ತಿದ್ದರು. ಆಧುನಿಕ ಸಲಕರಣೆಗಳಿಲ್ಲದೇ 15,400 ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದರು ಎಂದು ಹೇಳಿದರು.
ಕಸಾಪ ತಾಲೂಕು ಮಾಜಿ ಅಧ್ಯಕ್ಷ ವಿ.ಎನ್. ರಮೇಶ್ ಮಾತನಾಡಿ, ಅನಂತಮೂರ್ತಿ ಅವರು ಸಾಹಿತ್ಯದ ಮೇರು ಪರ್ವತವಾಗಿದ್ದರು. ಅವರ ಸಂಸ್ಕಾರ ಕೃತಿ ಚಲನಚಿತ್ರವಾಗುವ ಜತೆಗೆ ಅವರ ವೈಚಾರಿಕ ವಿಚಾರಧಾರೆಗಳಿಗೆ ಕನ್ನಡಿಯಾಗಿತ್ತು ಎಂದರು.
ಇನ್‌ಸ್ಪೈರ್ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ ಮೂರ್ತಿ ಅವರಿಗೆ ಯು.ಆರ್. ಅನಂತಮೂರ್ತಿ ಪ್ರಶಸ್ತಿ, ನಿವೃತ್ತ ಆರೋಗ್ಯ ಸಹಾಯಕಿ ಶಾರದಮ್ಮ ಅವರಿಗೆ ಸೂಲಗಿತ್ತಿ ನರಸಮ್ಮ ಪ್ರಶಸ್ತಿ, ಪ್ರಗತಿಪರ ರೈತ ಚಿಕ್ಕನಹಳ್ಳಿ ಸುಬ್ಬಣ್ಣ ಹಾಗೂ ರೈತ ಮಹಿಳೆಯರಾದ ಜಯಮ್ಮ, ಗೀತಾ, ರತ್ನಮ್ಮ ಅವರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ. ಸುಧಾಕರ್, ದೇವನಹಳ್ಳಿ ತಾಲೂಕು 12ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬೇ.ಕ. ಮೂರ್ತೀಶ್ವರಯ್ಯ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ. ನಾರಾಯಣಸ್ವಾಮಿ, ಶಿಕ್ಷಕ ಅಬ್ದುಲ್ ಸತ್ತಾರ್, ಗಂಗಾಮತಸ್ಥ ಸಮುದಾಯದ ಜಿಲ್ಲಾ ಸಂಚಾಲಕ ಮುನಿರಾಜು, ಮತ್ತಿತರರು ಇದ್ದರು.