ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಯಲುಸೀಮೆ ಜಿಲ್ಲೆಯಲ್ಲಿ ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡಿರುವ ಸಣ್ಣ ನೀರಾವರಿ ಹಾಗೂ ಅಂತರ್ಜಲ ಇಲಾಖೆ ಸಾಕಷ್ಟು ಯೋಜನೆ ಕಾರ್ಯಗತಗೊಳಿಸುತ್ತಿವೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಜಲಭದ್ರತೆ ಯೋಜನೆಯಿಂದ ಅಂತರ್ಜಲ ಮರುಪೂರ್ಣಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಯಾವುದೇ ನದಿ ಮೂಲವಿಲ್ಲದ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂಗುಗುಂಡಿ, ಚೆಕ್‌ಡ್ಯಾಂ, ಕೊಳವೆಬಾವಿ ರೀಚಾರ್ಜ್, ಕೆರೆ-ಕುಂಟೆ, ಕಲ್ಯಾಣಿಗಳ ಅಭಿವೃದ್ಧಿ ಸೇರಿ ಜಲ ಮರುಪೂರಣಗೊಳಿಸುವ ಸಾಕಷ್ಟು ಕಾರ್ಯಕ್ರಮಗಳು ಈ ಯೋಜನೆಯಡಿ ಚುರುಕು ಪಡೆದಿವೆ.
ಲಭ್ಯತೆಗಿಂತ ಬಳಕೆಯೇ ಹೆಚ್ಚು: ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಮೊದಲು ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ, ಪಂಚಾಯಿತಿ ವ್ಯಾಪ್ತಿಯಲ್ಲಿನ ಜನಸಂಖ್ಯೆ, ಜಾನುವಾರು ಸಂಖ್ಯೆ, ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವ ನೀರಿನ ಪ್ರಮಾಣ ಹಾಗೂ ಸ್ಥಳೀಯವಾಗಿ ಕೈಗಾರಿಕೆಗಳಲ್ಲಿನ ನೀರಿನ ಬಳಕೆ ಪ್ರಮಾಣ ಅಂದಾಜು ಮಾಡಲಾಗುವುದು. ಇಲಾಖೆ ನಡೆಸಿದ ಸರ್ವೇಯಂತೆ ಸರಾಸರಿ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಲಭ್ಯತೆಗಿಂತ ಅದರ ಖರ್ಚಿನ ಪ್ರಮಾಣ ದುಪ್ಪಟ್ಟು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂಥ ಪ್ರದೇಶಗಳಲ್ಲಿ ನೀರಿನ ಮರುಪೂರಣ ಅತ್ಯವಶ್ಯವೆಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಅನುದಾನದಡಿ, ಹೆಚ್ಚಿನ ಪ್ರಮಾಣದಲ್ಲಿ ಜಲ ಮರುಪೂರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂತರ್ಜಲ ವೃದ್ಧಿಸುವ ಗುರಿ: ಅಟಲ್ ಭೂಜಲ ಯೋಜನೆಯಡಿ ಅಂರ್ತಜಲ ವೃದ್ಧಿಗೆ ಶ್ರಮಿಸುತ್ತಿರುವ ಇಲಾಖೆಗೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗಲಿದೆ. ಇನ್ನಿತರ ಯೋಜನೆಗಳಿಗೆ ಹೋಲಿಸಿದರೆ, ಈ ಜಲಭದ್ರತೆ ಯೋಜನೆಗೆ ಅನುದಾನ ಮಿತಿ ಇಲ್ಲ ಎನ್ನಲಾಗಿದ್ದು, ಇದರ ಸದ್ಬಳಕೆಯಿಂದ ಬರಪೀಡಿತ ಜಿಲ್ಲೆಯಲ್ಲಿ ನೀರಾವರಿ ಕನಸು ಬಿತ್ತಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜನರಲ್ಲಿ ಅರಿವು: ಈ ಯೋಜನೆಯಡಿ ಜನರಲ್ಲಿ ನೀರಿನ ಬಳಕೆ ಹಾಗೂ ಮರುಪೂರ್ಣದ ಬಗ್ಗೆ ಹೆಚ್ಚು ಅರಿವು ಮೂಡಿಸುವುದು. ಅನುದಾನದಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೇ ಹಣ ವಿನಿಯೋಗಿಸಲಾಗುತ್ತಿದೆ. ಆಯಾ ಗ್ರಾಮ ಪಂಚಾಯಿತಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೃಷಿ ಇಲಾಖೆ ಸೇರಿ ಕೆಲವೊಂದು ಇಲಾಖೆಗಳ ಸಹಯೋಗದಲ್ಲಿ ಜನರಲ್ಲಿ ಅಂತರ್ಜಲ ಸಂರಕ್ಷಣೆ ಹಾಗೂ ಮರುಪೂರ್ಣದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
103 ಪಂಚಾಯಿತಿಗಳಿಗೆ ವಿಸ್ತರಣೆ ಅಟಲ್ ಭೂಜಲ ಯೋಜನೆ ಅಥವಾ ಅಟಲ್ ವಾಟರ್ ಹೆಸರಿನ ಅಂತರ್ಜಲ ನಿರ್ವಹಣಾ ಯೋಜನೆಯಾಗಿದ್ದು, 2019ರ ಡಿಸೆಂಬರ್‌ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು. ಇದರ ಉದ್ದೇಶ ಅಂತರ್ಜಲಮಟ್ಟ ಸುಧಾರಿಸುವುದಾಗಿದೆ. ದೇಶದ 7 ರಾಜ್ಯಗಳಲ್ಲಿ ಈ ಯೋಜನೆಗೆ ಚಾಲನೆ ದೊರೆತಿದೆ. ರಾಜ್ಯದಲ್ಲಿ ಕೆಲವೊಂದು ಜಿಲ್ಲೆಗಳನ್ನು ಈ ಯೋಜನಾ ವ್ಯಾಪ್ತಿಗೆ ತರಲಾಗಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯೂ ಸೇರಿದೆ. ಜಿಲ್ಲೆಯ 103 ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆ ವಿಸ್ತರಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಅಟಲ್ ಭೂಜಲ್ ಯೋಜನೆಯಡಿ, ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಅಂತರ್ಜಲ ರಕ್ಷಣೆ ಹಾಗೂ ಜಲ ಮರುಪೂರಣಗೊಳಿಸುವ ದೃಷ್ಟಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಜತೆಗೆ ನೀರಿನ ಸಂರಕ್ಷಣೆ ಬಗ್ಗೆ ದೊಡ್ಡಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಸಾಕಷ್ಟು ಅನುದಾನವಿದ್ದು, ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಶರತ್, ಜಲಸಂಪನ್ಮೂಲ ತಜ್ಞ, ದೇವನಹಳ್ಳಿ