ಚಿಕ್ಕೋಡಿ: ಮಹಾರಾಷ್ಟ್ರದ ಮಹಾಬಳೇಶ್ವರ, ಕೊಯ್ನ, ನವಜಾ ಡ್ಯಾಂ ಪರಿಸರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿನ ಪಂಚ ನದಿಗಳಿಗೆ 1,05,723 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನದಿಗಳ ನೀರಿನ ಮಟ್ಟ ಭಾನುವಾರ ಮತ್ತೆ 2 ಅಡಿ ಏರಿಕೆಯಾಗಿದ್ದರಿಂದ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.
4 ದಿನಗಳಿಂದ ಮಹಾರಾಷ್ಟ್ರ ಜಲಾನಯನ ಪ್ರದೆಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ಮತ್ತು ದೂಧಗಂಗಾ ಸೇರಿ ಉಪನದಿಗಳಿಗೆ ನೀರು ನಿರಂತರವಾಗಿ ಹರಿದು ಬರುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ನದಿ ತೀರದ ರೈತರು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುತ್ತಿದ್ದಾರೆ.
ದೂಧಗಂಗಾ ನದಿಗೆ 24,640 ಕ್ಯೂಸೆಕ್, ಕೃಷ್ಣಾ ನದಿಗೆ 81,083 ಕ್ಯೂಸೆಕ್ ಹೀಗೆ ಒಟ್ಟು 1,05,723 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದ್ದು, ದೂಧಗಂಗಾ ಮತ್ತು ವೇದಗಂಗಾ ನದಿಗಳ ಹತ್ತಿರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಬೆಳೆಗಳು ಜಲಾವೃತಗೊಳ್ಳುತ್ತಿವೆ.
ವೇದಗಂಗಾ ನದಿಯ ಭೋಜವಾಡಿ- ಶಿವಾಪುರವಾಡಿ, ಬಾರವಾಡ-ಕುನ್ನೂರ, ಸಿದ್ನಾಳ- ಅಕ್ಕೋಳ ಮತ್ತು ಜತ್ರಾಟ-ಭಿವಸಿ ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ, ಕೃಷ್ಣಾ ನದಿಯ ಮಾಂಜರಿ-ಸವದತ್ತಿ ಬ್ಯಾರೇಜ್‌ಗಳು ಜಾಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.
ಸದಲಗಾ-ಬೋರಗಾಂವ, ಬೇಡಕಿಹಾಳ- ಬೋರಗಾಂವ ಮತ್ತು ಯಕ್ಸಂಬಾ- ದಾನವಾಡ ಸೇತುವೆಗಳಿಂದ ಸಂಚಾರ ಎಂದಿನಂತೆ ಪ್ರಾರಂಭವಿದೆ. ನೀರಿನ ಹರಿವು ಹೆಚ್ಚಾದಲ್ಲಿ ಎರಡು ದಿನಗಳಲ್ಲಿ ಮುಳುಗಡೆಯಾಗುವ ಸಾಧ್ಯತೆಗಳಿವೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿಯೂ ನಿರಂತರ ಮಳೆ ಸುರಿಯುತ್ತಿದೆ.