ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಬನದ ಹುಣ್ಣಿಮೆ ಅಂಗವಾಗಿ ಸೋಮವಾರ ಸಂಭ್ರಮದಿಂದ ಜಾತ್ರೆ ಜರುಗಿತು. ಹೊಸ ವರ್ಷದ ಆರಂಭದಲ್ಲೇ ನಡೆದ ಜಾತ್ರೆಗೆ ಪ್ರವಾಹದಂತೆ ಭಕ್ತಸಾಗರ ಹರಿದುಬಂತು. ನಸುಕಿನಿಂದಲೇ ಸರತಿಯಲ್ಲಿ ನಿಂತು, ಯಲ್ಲಮ್ಮ ದೇವಿ ದರ್ಶನ ಪಡೆದರು. ಭಾನುವಾರದಿಂದಲೇ ಲಾಂತರ ಭಕ್ತರು ಗುಡ್ಡದತ್ತ ಹೆಜ್ಜೆಹಾಕಿದ್ದರು. ಸೋಮವಾರ ಬೆಳಗ್ಗೆ ಯಲ್ಲಮ್ಮನಗುಡ್ಡದ ಪರಿಸರ ಭಕ್ತರಿಂದ ಕಿಕ್ಕಿರಿದು ಸೇರಿತ್ತು. ಎತ್ತ ನೋಡಿದರೂ ಜನಸಾಗರವೇ ಕಂಡಿತು. ಬೆಳಗ್ಗೆ ಮತ್ತು ಸಂಜೆ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿತು. ಯಲ್ಲಮ್ಮ ದೇವಸ್ಥಾನದೆಲ್ಲೆಡೆ ಧಾರ್ಮಿಕ ವಿಧಿವಿಧಾನ ನೆರವೇರಿದವು.
ಸೌಕರ್ಯ ಮಧ್ಯೆ ಕೊರತೆ: 2024ರಲ್ಲಿ ಯಲ್ಲಮ್ಮ ದೇವಿ ದೇವಸ್ಥಾನ ಅಭಿವದ್ಧಿ ಪ್ರಾಧಿಕಾರ ರಚಿಸಲಾಗಿದೆ. ಶಾಸಕ ವಿಶ್ವಾಸ ವೆದ್ಯ ನೇತತ್ವ ಮತ್ತು ಪ್ರಾಧಿಕಾರದ ಉಸ್ತುವಾರಿಯಲ್ಲಿ ನಡೆದ ಮೊದಲ ಜಾತ್ರೆಯಲ್ಲಿ ಭಕ್ತರಿಗೆ ಕುಡಿಯುವ ನೀರು, ವಸತಿ, ಶೌಚಗಹ ಮೊದಲಾದ ಸೌಕರ್ಯ ಕಲ್ಪಿಸಲಾಗಿತ್ತು. ಆದರೆ, 10 ಲಕ್ಕೂ ಅಧಿಕ ಭಕ್ತರು ಏಕಕಾಲಕ್ಕೆ ಬಂದಿದ್ದರಿಂದ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿತ್ತು.
ಜಾತ್ರೆಗೆ ಮೆರುಗು ತಂದ ಕಲಾವಿದರು: ಜೋಗತಿಯರು, ಭಂಡಾರ ಹಾರಿಸಿ ಕುಣಿದಾಡಿದ ಭಕ್ತರು ಮತ್ತು ವಿವಿಧ ಕಲಾ ಪ್ರಕಾರಗಳ ಜಾನಪದ ಕಲಾವಿದರು ಜಾತ್ರೆಗೆ ಮೆರುಗು ತಂದರು. ಜೋಗುಳಬಾವಿ ಸತ್ಯಮ್ಮನ ಸನ್ನಿಧಿಯಲ್ಲಿ ಹಾಗೂ ಯಲ್ಲಮ್ಮ ದೇವಸ್ಥಾನ ಬಳಿಯ ಎಣ್ಣೆ ಹೊಂಡದಲ್ಲಿ ಭಕ್ತರು ಪವಿತ್ರಸ್ನಾನ ಮಾಡಿದರು.
ದೇವಿಗೆ ನೈವೇದ್ಯ ಅರ್ಪಣೆ: ಮಹಿಳೆಯರು ರಸ್ತೆಬದಿಯೇ ಒಲೆ ಹೂಡಿ, ಕಡಬು, ಹೋಳಿಗೆ, ಕರ್ಚಿಕಾಯಿ, ಗಾರ್ಗಿ, ಬದನೆಕಾಯಿ, ಮಡಿಕೆ ಕಾಳು, ಅನ್ನ&ಸಾರು, ವಡೆ ಮತ್ತಿತರ ಖಾದ್ಯಗಳನ್ನು ತಯಾರಿಸಿದರು. ಬಳಿಕ ಜೋಗತಿಯರ ನೇತತ್ವದಲ್ಲಿ ಪರಡಿ ತುಂಬಿ ನೆವೇದ್ಯ ಅರ್ಪಿಸಿದರು. ಕುಟುಂಬಸ್ಥರು, ಸ್ನೇಹಿತರೆಲ್ಲ ಒಟ್ಟಾಗಿ ಕುಳಿತು ಭೋಜನ ಸವಿದರು.
ವ್ಯಾಪಾರ ಜೋರು: ತೆಂಗಿನಕಾಯಿ, ಕುಂಕುಮ&ಭಂಡಾರ, ಸೀರೆ, ಖಣ, ಕರ್ಪೂರ, ಬಾಳೆಹಣ್ಣಿನ ವ್ಯಾಪಾರ ಜೋರಾಗಿತ್ತು.
ಟ್ರಾಫಿಕ್ ಜಾಮ್: ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಜೋಗುಳಬಾವಿ ಮತ್ತು ಸವದತ್ತಿಯ ನೂಲಿನ ಗಿರಣಿ ಮಾರ್ಗದಲ್ಲಿ ವಾಹನದಟ್ಟಣೆ ಹೆಚ್ಚಿತ್ತು. ಜನರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.