ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದೇವತೆ ಸುಗಂಧಾದೇವಿ ಜಾತ್ರಾ ಮಹೋತ್ಸವಕ್ಕೆ ವ್ಯಾಪಾರಕ್ಕಾಗಿ ಆಗಮಿಸಿದ್ದ ಮಹಾರಾಷ್ಟ್ರದ ವಯೋವೃದ್ಧ ಹಾಗೂ ಬಾಲಕಿ ಗ್ರಾಮದಲ್ಲಿಯೇ ಉಳಿದುಕೊಂಡಿರುವುದು. 
ಜಿಲ್ಲೆ

ಜಾತ್ರೆಗೆ ಬಂದಿದ್ದ ವ್ಯಾಪಾರಿಗಳಿಗೆ ಸಂಕಷ್ಟ

ಬಾವನಸೌಂದತ್ತಿ: ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದೇವತೆ ಸುಗಂಧಾದೇವಿ ಜಾತ್ರಾ ಮಹೋತ್ಸವಕ್ಕೆ ವ್ಯಾಪಾರಕ್ಕಾಗಿ ಆಗಮಿಸಿದ್ದ ಮಹಾರಾಷ್ಟ್ರದ 30ಕ್ಕೂ ಹೆಚ್ಚು ಜನರಿಗೆ ಲಾಕ್‌ಡೌನಿಂದ ಸಮಸ್ಯೆ ಎದುರಾಗಿದ್ದು, ಊಟಕ್ಕಾಗಿ ಪರದಾಡುತ್ತಿದ್ದಾರೆ. ಬಾವನಸೌಂದತ್ತಿ ಗ್ರಾಮದಲ್ಲಿ ಪ್ರತಿವರ್ಷ ರಂಗಪಂಚಮಿಯಂದು ಸುಗಂಧಾದೇವಿ ಜಾತ್ರೆ ಸಂಭ್ರಮದಿಂದ ಜರುಗುತ್ತದೆ. ಜಾತ್ರೆಯಲ್ಲಿ ವ್ಯಾಪಾರ ಮಾಡಲು ನೆರೆ ರಾಜ್ಯ ಮಹಾರಾಷ್ಟ್ರದಿಂದ ಹಲವು ಜನ ಬರುತ್ತಾರೆ. ಅದೇ ರೀತಿ ಈ ಬಾರಿಯೂ ಜಾತ್ರೆಗೆ ಬಂದಿದ್ದರು. ಬಂದ ವೇಳೆಯಲ್ಲಿಯೇ ಕರೊನಾ ವೈರಸ್ ನಿಯಂತ್ರಿಸಲು ರಾಜ್ಯದಲ್ಲಿ ಲಾಕ್‌ಡೌನ್ ಆದೇಶ ಹೊರಡಿಸಲಾಯಿತು. ಇದರಿಂದ ಇವರು ಮರಳಿ ತಮ್ಮ ಊರುಗಳಿಗೆ ಹೋಗಲಾಗದೆ ಗ್ರಾಮದಲ್ಲಿಯೇ ಉಳಿಯುವಂತಾಯಿತು. ಆದರೆ, ಇವರಿಗೆ ಇಲ್ಲಿ ವಾಸಿಸಲು ಸೂಕ್ತ ನೆಲೆ ಇಲ್ಲ. ಒಂದು ಹೊತ್ತಿನ ಊಟವೂ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ಪರಿಸ್ಥಿತಿ ಕಂಡು ಗ್ರಾಮ ಪಂಚಾಯಿತಿಯವರು ಮತ್ತು ಗ್ರಾಮದ ಕೆಲವರು ಇಲ್ಲಿಯವರೆಗೆ ಇವರಿಗೆ ಆಹಾರ ನೀಡಿ ಅಲ್ಪ ಆಸರೆಯಾಗಿದ್ದಾರೆ. ಆದರೆ, ತಾಲೂಕು ಆಡಳಿತ ಮಾತ್ರ ಇವರ ನೆರವಿಗೆ ಧಾವಿಸದೇ ನಿರ್ಲಕ್ಷ್ಯ ವಹಿಸಿದೆ. ವ್ಯಾಪಾರಕ್ಕಾಗಿ ಬಂದ ಇವರು ಲಾಕ್‌ಡೌನ್ ಆದೇಶದಿಂದ ನಷ್ಟಕ್ಕೊಳಗಾಗಿದ್ದಾರೆ. ತಾವು ತಂದ ಸಾಮಗ್ರಿಗಳೊಂದಿಗೆ ಮರಳಿ ಅವರ ಊರುಗಳಿಗೆ ಸೇರಲೂ ಅವರಿಗೆ ಕಷ್ಟಕರವಾಗಿದೆ. ಇನ್ನಾದರೂ ತಾಲೂಕಾಡಳಿತ ಇವರಿಗೆ ಊಟದ ವ್ಯವಸ್ಥೆ ಕಲ್ಪಿಸಿ, ಆದಷ್ಟು ಬೇಗ ತಮ್ಮ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.