ಜಿಲ್ಲೆ

60 ದಿನಕ್ಕೆ ಕಾಂಗ್ರೆಸ್ ಭ್ರಷ್ಟಾಚಾರ ಬಯಲು: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಟೀಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಆಸೆ ಆಮಿಷಗಳನ್ನು ತೋರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಕೇವಲ 60 ದಿನಗಳಲ್ಲಿಯೇ ಸರ್ಕಾರದ ನಿಜಬಣ್ಣವು ಭ್ರಷ್ಟಾಚಾರ, ವರ್ಗಾವಣೆ ದಂಧೆ ಮೂಲಕ ಬಟಾಬಯಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಟೀಕಿಸಿದರು.

ನಗರದಲ್ಲಿ ನಡೆಯುತ್ತಿರುವ ಬಿಜೆಪಿ ಧರಣಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಂದು ರೀತಿಯ ಪವರ್ ಸೆಂಟರ್ ಆಗಿದೆ. ಸಿದ್ದರಾಮಯ್ಯ ಒಂದು ಕಡೆ, ಡಿ.ಕೆ.ಶಿವಕುಮಾರ್ ಮತ್ತೊಂದು ಕಡೆ ಪವರ್ ಸೆಂಟರ್ ಆಗಿ ಹೋಗಿದೆ. ವರ್ಗಾವಣೆ ದಂಧೆ ಈ ಸೆಂಟರ್‌ನ ಮೂಲವಾಗಿದೆ. ಇನ್ನೊಂದೆಡೆ ಡಾ.ಯತೀಂದ್ರ ಸಿದ್ದರಾಮಯ್ಯ ಕೂಡ ವರ್ಗಾವಣೆ ಪವರ್ ಸೆಂಟರ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಆಯಕಟ್ಟಿನ ಕಡೆ ಭೈರತಿ ಸುರೇಶ್ ಕೂಡ ಒಂದು ಕಡೆ ಲಾಭಿ ಮಾಡುತ್ತಿದ್ದಾರೆ, ಕೇವಲ ಎರಡು ತಿಂಗಳಲ್ಲಿ ಸರ್ಕಾರದ ನಿಜ ಬಣ್ಣ ಜನರಿಗೆ ಗೊತ್ತಾಗಿದೆ ಎಂದು ಟೀಕಿಸಿದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಸ್ವಾಮಿ ಅವರು ವರ್ಗಾವಣೆಯಲ್ಲಿ ನೇರವಾಗಿ ಭಾಗವಹಿಸಿ ಸಾರಿಗೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿ, ಇವರ ಹೆಸರನ್ನ ಹೇಳಿ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗುತ್ತಾರೆ. ಇದು ಎಷ್ಟರ ಮಟ್ಟಕ್ಕೆ ಈ ಜಿಲ್ಲೆಯಲ್ಲಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿರುವುದು ಸಾಬೀತಾಗಿದೆ. ಚಲುವರಾಯಸ್ವಾಮಿ ಅವರು ತಮ್ಮ ಇಲಾಖೆಯ ಮೂಲಕವೇ ಹ್ತಾ ವಸೂಲಿ ಮಾಡುತ್ತಿದ್ದಾರೆಂಬುದನ್ನು ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ನೇರವಾಗಿ ವಸೂಲಿಗೆ ಇಳಿದಿದೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ವಿವಿಧ ಪಕ್ಷದ ನಾಯಕರನ್ನು ಕರೆತಂದು 300 ಕೋಟಿ ರೂ ಖರ್ಚು ಮಾಡುತ್ತಾರೆ. ಈ ಹಣ ಎಲ್ಲಿಂದ ಬಂತು?. ವೆಸ್ಟೆಂಡ್‌ನಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂಬುದನ್ನೇ ಆರೋಪಿಸುತ್ತಿದ್ದ ಕಾಂಗ್ರೆಸ್ ಈಗ ಏನು ಮಾಡಿದೆ ಎಂಬುದು ಜನರಿಗೆ ತಿಳಿದಿದೆ. ವಿದ್ಯಾಸಿರಿಯಿಲ್ಲ, ಭೂಸಿರಿಯಿಲ್ಲ, ರೈತರಿಗೆ ಬಜೆಟ್‌ನಲ್ಲಿ ಕತ್ತರಿ ಹಾಕಿದೆ. ಸರ್ಕಾರ ಅಧಿಕಾರಿಕ್ಕೆ ಬಂದ ಕೆಲವೇ ದಿನದಲ್ಲಿ 60ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈವರೆಗೂ ಕೃಷಿ ಸಚಿವ ಚಲುವರಾಯಸ್ವಾಮಿ ಮೃತ ರೈತರ ಕುಟುಂಬಕ್ಕೆ ಭೇಟಿ ನೀಡಿಲ್ಲ, ಇದನ್ನ ಕೇಳಿದರೆ ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವ ಕಾಂಗ್ರೆಸ್‌ನಿಂದ ಪ್ರತಿ ಹೋರಾಟ ಮಾಡಿಸಲಾಗುತ್ತಿದೆ. ಇದು ಚಲುವರಾಯಸ್ವಾಮಿ ಅವರಿಗೆ ಶೋಭೆಯಲ್ಲ. ನಿಜವಾದ ಹೋರಾಟ ನಮ್ಮದು. ಆದರೆ, ಹೋರಾಟ ಮಾಡಲು ನಿಮಗೆ ಯೋಗ್ಯತೆಯಿಲ್ಲ. ವರ್ಗಾವಣೆ ದಂಧೆಯಲ್ಲಿ ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ನೇರವಾಗಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಪರವಿದ್ದವರು, ಈಗ ಆ ಪಕ್ಷದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕೂಡಲೇ ಅವರ ಸಮಸ್ಯೆ ಬಗಹರಿಸಿ ಮುಖ್ಯಮಂತ್ರಿಗಳೇ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ವಿದ್ಯಾ ನಾಗೇಂದ್ರ, ಎಚ್.ಆರ್.ಅರವಿಂದ್, ಅಶೋಕ್ ಜಯರಾಂ, ಪ.ನಾ.ಸುರೇಶ್, ಸುಜಾತಾ ರಮೇಶ್, ವಿವೇಕ್, ಡಾ.ಸದಾನಂದ, ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ಸಿದ್ದರಾಜುಗೌಡ, ಲಕ್ಷ್ಮೀ, ಮಂಜುಳಾ, ರಮೇಶ್, ಹರ್ಷ ಅಂಚೆದೊಡ್ಡಿ ಇತರರಿದ್ದರು.