ಜಿಲ್ಲೆ

ಜ್ಯೋತಿಷ್ಯ ಶಾಸ್ತ್ರ ದುರುಪಯೋಗವಾಗದಿರಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಜ್ಯೋತಿಷ್ಯ ಶಾಸ್ತ್ರವು ವಿಜ್ಞಾನವಾಗಿದ್ದು, ಇಲ್ಲಿ ಸಹ ಗಣಿತ ಸೂತ್ರಗಳಿವೆ. ವರ್ಷಕ್ಕೆ 12 ಮಾಸ, 12 ಹುಣ್ಣಿಮೆ, 12 ಅಮವಾಸ್ಯೆ, 12 ರಾಶಿ ಹಾಗೂ 27 ನಕ್ಷತ್ರ ಮತ್ತು 360 ದಿನಗಳು ಇದ್ದಂತೆ, ಒಂದು ವೃತ್ತದಲ್ಲಿ 360 ಎಂಬ ಮಾಪನ ಕಾಣುತ್ತೇವೆ. ಇದು ಖಗೋಳಶಾಸ್ತ್ರದ ಅಂಕಿ, ಸಂಖ್ಯೆ, ಸೂತ್ರಗಳನ್ನು ವೈಜ್ಞಾನಿಕ ಹಿನ್ನೆಲೆ ಆಧರಿಸಿ ಹೇಳುವ ಶಾಸ್ತ್ರವಾಗಿದೆ ಎಂದು ಜ್ಯೋತಿಷ್ಯ ಅಂಕಣ ಬರಹಗಾರ ವಿದ್ವಾನ್ ನವೀನಶಾಸ್ತ್ರಿ ಪುರಾಣಿಕ ಹೇಳಿದರು.
ನಗರದ ಜೆಎಸ್‌ಎಸ್ ಕಾಲೇಜಿನ ಕನ್ನಡ ವಿಭಾಗ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪಠ್ಯ ಆಧಾರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಕೆಲವರು ಜ್ಯೋತಿಷ್ಯದ ಹೆಸರಿನಲ್ಲಿ ಹಣ ಗಳಿಕೆ ಹಾಗೂ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖೇದದ ಸಂಗತಿ. ಜ್ಯೋತಿಷ್ಯ ಶಾಸ್ತ್ರವನ್ನು ನಿಷ್ಠೆ ಹಾಗೂ ಪ್ರಮಾಣಿಕತೆಯಿಂದ ಅಧ್ಯಯನ ಮಾಡಿ, ಅದನ್ನು ಜನೋಪಯೋಗಿಯಾಗಿ ಬಳಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿನದತ್ತ ಹಡಗಲಿ ಮಾತನಾಡಿ, ಮನುಷ್ಯನ ಜೀವನ ಮತ್ತು ಬದುಕಿಗೆ ಸಂಬಂಧಪಟ್ಟಂತೆ ಪ್ರಕೃತಿಯಲ್ಲಿಯ ಪ್ರತಿ ಘಟನಾವಳಿಗೂ ಗ್ರಹಗತಿಗಳ ಆಧಾರದ ವೈಜ್ಞಾನಿಕ ಹಿನ್ನೆಲೆ ಇರುವುದನ್ನು ಕಾಣುತ್ತೇವೆ. ಜ್ಯೋತಿಷ್ಯ ಎಂಬುದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಮಹಿಳೆಯರು ಹಣೆ ಮೇಲೆ ಇಡುವ ಕುಂಕುಮ, ಧರಿಸುವ ಮೂಗುತಿ, ಕಾಲ್ಗೆಜ್ಜೆ, ಕಾಲುಂಗುರ, ಇತ್ಯಾದಿಗಳಿಗೆಲ್ಲ ವೈಜ್ಞಾನಿಕ ಕಾರಣ ಕಾಣುತ್ತೇವೆ. ನಂಬಿಕೆ ಇರಬೇಕು. ಆದರೆ ಮೂಢನಂಬಿಕೆಗಳಿಂದ ದೂರವಿರಬೇಕು ಎಂದು ಅಭಿಪ್ರಾಯಪಟ್ಟರು.
ಡಾ. ವಿ.ಜಿ. ಪೂಜಾರ ಸ್ವಾಗತಿಸಿದರು. ಪ್ರೊ. ದೀಪಾ ಸಂಕಪಾಳೆ ನಿರೂಪಿಸಿದರು. ಡಾ. ಆರ್.ವಿ. ಪಾಟೀಲ ವಂದಿಸಿದರು.