ಬೆಳಗಾವಿ ಕೆಎಲ್‌ಇ ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರದಲ್ಲಿ ಗುರುವಾರ ನೇರ ಫೋನ್-ಇನ್ ಪ್ರಸಾರ ಕಾರ್ಯಕ್ರಮ ನಡೆಯಿತು. ಡಾ.ಜ್ಯೋತಿ ಹಟ್ಟಿಹೋಳಿ, ಮನಿಷಾ ಪಿ.ಎಸ್., ಮಂಜುನಾಥ ಪೈ ಇದ್ದರು. 
ಜಿಲ್ಲೆ

ಅಸ್ತಮಾ ಕುರಿತು ಜಾಗೃತಿ

ಶಂಕರ ಗೆಜ್ಜಿ

ಬೆಳಗಾವಿ: ಕೆಎಲ್‌ಇ ವೇಣುಧ್ವನಿ 90.4 ಎಫ್.ಎಂ. ಸಮುದಾಯ ಬಾನುಲಿ ಕೇಂದ್ರ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಗುರುವಾರ ನೇರ ಫೋನ್-ಇನ್ ಪ್ರಸಾರ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 10 ರಿಂದ 11 ಗಂಟೆವರೆಗೆ ನಡೆದ ಕಾರ್ಯಕ್ರಮದಲ್ಲಿ ಕೆಎಲ್‌ಇ ಜವಾಹರಲಾಲ ನೆಹರೂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ, ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯೆ ಡಾ.ಜ್ಯೋತಿ ಹಟ್ಟಿಹೋಳಿ ಅವರು ಅಸ್ತಮಾ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿ ಜಾಗೃತಿ ಮೂಡಿಸಿದರು. ಮನುಷ್ಯನ ಎದೆಯಲ್ಲಿ ಬಿಗಿತ, ಉಸಿರಾಡಲು ಕಷ್ಟವಾಗುವುದು, ಪದೇ ಪದೆ ಕೆಮ್ಮು ಮತ್ತು ಉಸಿರುಗಟ್ಟಿದಂತೆ ಅನಿಸುವುದು ಅಸ್ತಮಾ ಕಾಯಿಲೆಯ ಸಾಮಾನ್ಯ ಲಕ್ಷಣಗಳು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೆ ಮಾರಕವಾಗಬಹುದು. ಪೂರ್ತಿಯಾಗಿ ಅಸ್ತಮಾ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ಪರಿಣಾಮ ಮತ್ತು ಲಕ್ಷಣಗಳನ್ನು ಕಡಿಮೆಗೊಳಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ.ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.