ಜಿಲ್ಲೆ

ಆಸ್ಟರ್ ಕ್ಯಾನ್ಸರ್ ಕಾನ್‌ಕ್ಲೇವ್ ; ಏಷ್ಯಾದಲ್ಲೇ ಪ್ರಥಮ ಅತ್ಯಾಧುನಿಕ ರೇಡಿಯೇಷನ್ ಯಂತ್ರಕ್ಕೆ ಚಾಲನೆ

ಪ್ರಶಾಂತ ರಿಪ್ಪನ್​ಪೇಟೆ

ಬೆಂಗಳೂರು: ಈ ಹಿಂದೆ ಕ್ಯಾನ್ಸರ್‌ನ್ನು ಮಾರಣಾಂತಿಕ ರೋಗವೆಂದು ಪರಿಗಣಿಸಲಾಗುತ್ತಿತ್ತು. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಪ್ರಥಮ ಹಂತದಲ್ಲೇ ಸೂಕ್ತ ಚಿಕಿತ್ಸೆ ದೊರೆತರೆ ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಆಸ್ಟರ್ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ಆಂಕಾಲಜಿ ನಿರ್ದೇಶಕ ಡಾ.ಸೋಮಶೇಖರ್ ಎಸ್.ಪಿ. ಹೇಳಿದ್ದಾರೆ.

ಕ್ಯಾನ್ಸರ್ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ನಿರ್ವಹಣೆಯಲ್ಲಿ ಭಾರತ ಜಾಗತಿಕವಾಗಿ ಸಾಕಷ್ಟು ಅನ್ವೇಷಣೆಯನ್ನು ಮಾಡಿದ್ದು, ಆಸ್ಟರ್ ಹೆಲ್ತ್‌ಕೇರ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿರಿಸಿದೆ. ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆತಲ್ಲಿ ಕ್ಯಾನ್ಸರ್ ಕೂಡ ದೀರ್ಘಕಾಲೀನ ಒಂದು ಆರೋಗ್ಯ ಸಮಸ್ಯೆಯಾಗಲಿದೆ. ಇತರರಂತೆ 80-90 ವರ್ಷ ಔಷಧಿ ಸೇವನೆಯೊಂದಿಗೆ ಸಹಜವಾಗಿ ಬದುಕು ನಡೆಸಬಹುದು.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ತಂತ್ರಜ್ಞಾನ ಮತ್ತು ಸಮನ್ವಯ ಮುಖ್ಯ. ಈ ಬಗ್ಗೆ ಒಂದೇ ಪ್ಯಾನಲ್ ಮೂಲಕ ವಿಭಿನ್ನ ಕ್ಯಾನ್ಸರ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ದೇಶದಾದ್ಯಂತ 100 ತಜ್ಞರನ್ನೊಳಗೊಂಡ ಆಸ್ಟರ್ ಕ್ಯಾನ್ಸರ್ ಗ್ರಿಡ್‌ಗೆ ಚಾಲನೆ ನೀಡಲಾಗಿದೆ. ಇದರ ಮೂಲಕ ರೋಗಿಗೆ ಬೇಕಾದ ನಿಗದಿತ ಚಿಕಿತ್ಸೆಗೆ ಸಂಬಂಧಪಟ್ಟಂತೆ ಸಮನ್ವಯವನ್ನು ಸಾಧಿಸಿ ಸೂಕ್ತ ಚಿಕಿತ್ಸೆಯನ್ನು ಕಾಲಮಿತಿಯೊಳಗೆ ನೀಡಲು ಸಹಾಯವಾಗುತ್ತದೆ ಎಂದು ಸೊಮಶೇಖರ್ ವಿವರಿಸಿದರು.

ಆಸ್ಟರ್ ಗ್ರೂಪ್ ಅಧ್ಯಕ್ಷ ಡಾ. ಆಜಾದ್ ಮೂಪೆನ್ ಮಾತನಾಡಿ, ಕ್ಯಾನ್ಸರ್ ಆರೈಕೆಯಲ್ಲಿ ಹೊಸ ಚಿಕಿತ್ಸೆಯನ್ನು ಅನುಷ್ಠಾನಗೊಳಿಸಲು ವಿಶ್ವಪ್ರಸಿದ್ಧ ಆಂಕೊಲಾಜಿಸ್ಟ್‌ಗಳು, ಸಂಶೋಧಕರು ಮತ್ತು ಸಂಶೋಧನಾ ಸಂಸ್ಥೆಗಳು ಹಾಗೂ ಪ್ರಮುಖ ಫಾರ್ಮಾ, ಬಯೋಟೆಕ್ ಕಂಪನಿಗಳೊಂದಿಗೆ ಕೈಜೋಡಿಸುತ್ತಿದ್ದೇವೆ. ಇದರಿಂದ ಪರಿಹಾರ ಮತ್ತು ಕಾರ್ಯತಂತ್ರದಲ್ಲಿ ವೇಗ ದೊರೆಯಲಿದೆ ಎಂದರು.

ಸಮಾರಂಭದಲ್ಲಿ ಆಸ್ಟರ್ ಕ್ಯಾನ್ಸರ್ ಗ್ರಿಡ್, ಆಸ್ಟರ್ ಆಂಕೋ ಕಲೆಕ್ಟ್ ಹಾಗೂ ಪ್ರಿಸಿಷನ್ ಆಂಕಲಜಿ ಕ್ಲಿನಿಕ್‌ಗಳಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸೀನಿಯರ್ ಆಂಕಾಲಜಿಸ್ಟ್‌ಗಳಾದ ಡಾ.ಸಿ.ಎನ್.ಪಾಟೀಲ್, ಡಾ.ಎಸ್.ಜಿ.ರಮಣನ್, ಡಾ.ಶೇಖರ್ ಪಾಟೀಲ್, ಡಾ.ಗಂಗಾಧರನ್, ಡಾ.ರಮೇಶ ಕುಮಾರ್, ಡಾ.ಅರುಣ್ ವಾಡಿಯಾ ಮತ್ತಿತರರು ಪಾಲ್ಗೊಂಡು ಹೊಸ ಆವಿಷ್ಕಾರಗಳ ಕುರಿತು ಮಾತನಾಡಿದರು.

"ಆಸ್ಟರ್ ಇತಿಹಾಸದಲ್ಲಿ ಇಂದು ಹೊಸ ಮೈಲುಗಲ್ಲು ನಿರ್ಮಾಣವಾಗಿದೆ. ಕ್ಯಾನ್ಸರ್ ಆರೈಕೆಯಲ್ಲಿ ಜಗತ್ತು ಬಹಳ ವೇಗವಾಗಿ ಮುನ್ನಡೆಯುತ್ತಿದ್ದು, ಭಾರತ ಕೂಡಾ ಆ ವೇಗದಲ್ಲಿ ಭಾಗಿಯಾಗಿದೆ. ಆಸ್ಟರ್ ಗ್ರೂಪ್‌ನ 19 ಹೆಲ್ತ್ ಕೇಂದ್ರಗಳು ಆಧುನಿಕ ಚಿಕಿತ್ಸಾ ಉಪಕರಣಗಳನ್ನು ಹೊಂದಿದ್ದು, ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಅತ್ಯಾಧುನಿಕ ರೇಡಿಯೇಷನ್ ಯಂತ್ರ ಬೆಂಗಳೂರಿನ ವೈಟ್‌ಫೀಲ್ಡ್ ಆಸ್ಟರ್ ಹೆಲ್ತ್‌ಕೇರ್‌ನಲ್ಲಿ ಕಾರ್ಯಾರಂಭ ಮಾಡಿದ್ದು, ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡುವ ಗುರಿ ಹೊಂದಿದ್ದೇವೆ."

-ಡಾ.ಜೆಬಾ ಮೂಪೆನ್, ಆಸ್ಟರ್ ಗ್ರೂಪ್ ಕಾರ್ಯನಿರ್ವಾಹಕೇತರ ನಿರ್ದೇಶಕಿ