ಹುಣಸೂರು: ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಹುಣಸೂರು ತಾಲೂಕಿನ ವಿವಿಧ ಸಮಸ್ಯೆಗಳ ಪರಿಹಾರದ ಕುರಿತು ತೀವ್ರ ಚರ್ಚೆಗಳು ನಡೆದಿದ್ದು ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸುವುದಾಗಿ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಭರವಸೆ ನೀಡಿದ್ದಾರೆಂದು ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ತಿಳಿಸಿದ್ದಾರೆ.
ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಸ್ಮಶಾನವು ಲಕ್ಷ್ಮಣ ತೀರ್ಥ ನದಿ ತಟದಲ್ಲಿದ್ದು ತಗ್ಗು ಪ್ರದೇಶವಾಗಿರುವುದರಿಂದ ಯಾವಾಗಲೂ ನೀರು ನಿಂತು ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿರುವುದರಿಂದ ಬೇರೆ ಸರ್ಕಾರಿ ಜಮೀನು ಗುರುತಿಸಲು ಅಥವಾ ಈ ಸ್ಥಳಕ್ಕೆ ಮಣ್ಣು ಹಾಕಿ ಸ್ಥಳ ಎತ್ತರಿಸಿ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು ಎಂದು ನೇರಳಕುಪ್ಪೆ ಮಹದೇವ್ ವಿಜಯವಾಣಿಗೆ ಮಾಹಿತಿ ನೀಡಿದರು.
ಸ್ಮಶಾನ ಅಭಿವೃದ್ಧಿಗಾಗಿ 2015-16ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ 2,86,922 ರೂ.ಗಳ ಅನುದಾನದಲ್ಲಿ ಸ್ಮಶಾನಕ್ಕೆ ಮಣ್ಣು ಹಾಕಿ ಸಮತಟ್ಟು ಕಾಮಗಾರಿಯನ್ನು ಕೈಗೊಳ್ಳಲಾಗಿದೆ. 2022-23ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಸ್ಮಶಾನದಲ್ಲಿ ಗಿಡ-ಗಂಟಿಗಳ ಸ್ವಚ್ಛತೆಯನ್ನು ಕೈಗೊಳ್ಳಲಾಗಿದೆ. 2019-20ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಸ್ಮಶಾನಕ್ಕೆ ಹೋಗಲು ಕಾಂಕ್ರೀಟ್ ರಸ್ತೆ ಹಾಗೂ ಡೆಕ್‌ಅನ್ನು ನಿರ್ಮಿಸಲಾಗಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಮನು ಸಭೆಗೆ ತಿಳಿಸಿದರು.
ಸ್ಮಶಾನದ ಜಾಗಕ್ಕೆ ಮಣ್ಣು ತುಂಬಿಸಲು ಸುಮಾರು 45 ಲಕ್ಷ ರೂ.ಗಳ ಅಗತ್ಯವಿದೆ ಎಂದು ಇಒ ತಿಳಿಸಿದಾಗ, ಒಟ್ಟಿಗೆ ಮೂರು ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದಿದ್ದರೆ, ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಸೂಚಿಸಿದ್ದಾರೆಂದು ಅವರು ಮಹದೇವ್ ಮಾಹಿತಿ ನೀಡಿದರು.
ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದನಗಿರಿ ಸೋಲಿಗ ಹಾಗೂ ಹಕ್ಕಿಪಿಕ್ಕಿ ಜನಾಂಗದ ಹಾಡಿಗೆ ಸ್ಮಶಾನ ಇಲ್ಲದಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಚಂದನಗಿರಿ ಹಾಡಿ ನಾಗರಹೊಳೆ ಅರಣ್ಯದಂಚಿನ ಗ್ರಾಮವಾಗಿದ್ದು ಅಲ್ಲಿ ವಾಸ ಮಾಡುವ ಸೋಲಿಗ ಹಾಗೂ ಹಕ್ಕಿಪಿಕ್ಕಿ ಕುಟುಂಬಗಳು ಅರಣ್ಯ ಪ್ರದೇಶದಲ್ಲಿ ಈ ಹಿಂದಿನಿಂದಲೂ ಶವಸಂಸ್ಕಾರ ಮಾಡುತ್ತಿದ್ದಾರೆ. ಹಾಡಿಯ ಸಮೀಪ ಯಾವುದೇ ಸರ್ಕಾರಿ ಜಮೀನುಗಳು ಲಭ್ಯವಿಲ್ಲ. ಈಗಾಗಲೇ ನೇರಳಕುಪ್ಪೆ ಗ್ರಾಮಕ್ಕೆ ಗುರುತಿಸಿರುವ ಸ್ಮಶಾನ ಕೇವಲ ಒಂದೂವರೆ ಕಿ.ಮೀ. ಅಂತರದಲ್ಲಿರುವುದರಿಂದ ಅಲ್ಲಿಯೇ ಸಾರ್ವಜನಿಕ ಸ್ಮಶಾನದಲ್ಲಿ ಶವಸಂಸ್ಕಾರ ಮಾಡಬಹುದೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಬಿಳಿಕೆರೆ ಗ್ರಾಮ ಪಂಚಾಯಿತಿ ಮಳಿಗೆಗಳನ್ನು ಮೀಸಲಾತಿ ಅಡಿ ಮರು ಹರಾಜು ಮಾಡಬೇಕು. ಹನಗೋಡಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಸ್ಥಾಪಿಸಬೇಕು. ಕಟ್ಟೆಮಳಲವಾಡಿಯಲ್ಲಿ ಗಾಂಜಾ ಮತ್ತು ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳುವುದು ಸೇರಿದಂತೆ ಇತರ ಸಮಸ್ಯೆಗಳ ಕುರಿತು ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸದಸ್ಯರಾದ ಚಿಕ್ಕಜವರಯ್ಯ, ಪಿರಿಯಾಪಟ್ಟಣ ತಾಲೂಕಿನ ರವಿಕುಮಾರ್, ಎಚ್.ಡಿ.ಕೋಟೆಯ ವೇಣುಗೋಪಾಲ್, ತಲಕಾಡಿನ ಪಾರ್ವತಮ್ಮ, ಸಿಇಒ ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.