ಜಿಲ್ಲೆ

ನೋಟಿಸ್ ನೀಡಲು ಹೋದ ಪೊಲೀಸರಿಗೆ ಹಲ್ಲೆ

ಮೂಲ್ಕಿ: ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಠಾಣೆಗೆ ಹಾಜರಾಗುವಂತೆ ನೋಟೀಸ್ ನೀಡಲು ತೆರಳಿದ್ದ ಪೊಲೀಸರ ಮೇಲೆ ಮನೆ ಮಂದಿ ಹಲ್ಲೆ ನಡೆಸಿದ್ದು, ಎಎಸ್‌ಐ ಅಶೋಕ್ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮನೆಮಂದಿಗೂ ಗಾಯಗೊಂಡಿದ್ದು, ಉಭಯ ಕಡೆಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂಲ್ಕಿ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂಲ್ಕಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಕೆ.ಎಸ್.ರಾವ್ ನಗರ ನಿವಾಸಿ ಅನ್ಸಾರ್(20) ಎಂಬಾತ ನಗರದಲ್ಲಿನ ಸಂಬಂದಿಕರ ಮನೆಗೆ ಬಂದಿರುವ ಮಾಹಿತಿ ಪಡೆದ ಪೊಲೀಸರು ಆತನಿಗೆ ಠಾಣೆಗೆ ಹಾಜರಾಗುವಂತೆ ನೋಟೀಸ್ ನೀಡಲು ಗುರುವಾರ ಕೆ.ಎಸ್.ರಾವ್ ನಗರದ ಮಸೀದಿ ಬಳಿಯ ಆರೋಪಿಯ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಈ ಸಂದರ್ಭ ಮನೆ ಮಂದಿ ಬಾಗಿಲುಮುಚ್ಚಿ ಒಳಗೆ ಕುಳಿತುಕೊಂಡಿದ್ದಾರೆ.

ಬಾಗಿಲು ತೆರೆಯುವಂತೆ ಮನವಿ ಮಾಡಿದರೂ ಮನೆಯವರು ಜಗ್ಗದ ಕಾರಣ ಪೊಲೀಸರು ಮನೆಬಾಗಿಲು ತಳ್ಳಿ ಒಳಗೆ ನುಗ್ಗಿದ್ದಾರೆ. ಈ ಸಂದರ್ಭ ಮನೆ ಮಂದಿ ಹಾಗೂ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದ್ದು. ಎಎಸೈ ಅಶೋಕ್ ಮೇಲೆ ಆರೋಪಿ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಎಎಸೈ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿ ಅನ್ಸಾರ್, ಸಾಧಿಕ್, ಮತ್ತಿಬ್ಬರು ಮಹಿಳೆಯರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಆಪಾದನೆಯಡಿ ಮೂಲ್ಕಿ ಠಾಣೆಯಲ್ಲಿ ಎಎಸೈ ಅಶೋಕ್ ದೂರು ನೀಡಿದ್ದಾರೆ.

ಇದೇ ವೇಳೆ ಘಟನೆಗೆ ಸಂಬಂಧಿಸಿ ಪೊಲೀಸರು ಅನಾವಶ್ಯಕವಾಗಿ ಮನೆಗೆ ನುಗ್ಗಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಯ ದೊಡ್ಡಮ್ಮ ಮುಮ್ತಾಜ್ ಎಂಬುವರು ಪ್ರತಿ ದೂರು ನೀಡಿದ್ದು, ಸೊಸೆ ತಸ್ಮಿಯಾ ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆ ವೇಳೆ ಮನೆಯೊಳಗಿದ್ದ ಅನ್ಸಾರ್ ಬ್ಲೇಡ್‌ನಿಂದ ಕೈ ಕುಯ್ದುಕೊಂಡಿದ್ದು, ಕೈಯಿಂದ ರಕ್ತ ಹರಿಯುತ್ತಿದ್ದರೂ ಲೆಕ್ಕಿಸದೆ ಪೊಲೀಸರು ಆತನನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗಾಯಾಳು ಅನ್ಸಾರ್‌ನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನ್ಸಾರ್ ತಂದೆ ಸಾದಿಕ್, ದೊಡ್ಡಮ್ಮ ಮುಮ್ತಾಜ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಉಭಯ ಕಡೆಗಳಿಂದ ದೂರು, ಪ್ರತಿ ದೂರು ದಾಖಲಾಗಿದೆ. ಘಟನೆ ಬಳಿಕ ಕೆ.ಎಸ್.ರಾವ್ ನಗರ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪಣಂಬೂರು ಎಸಿಪಿ ಮಹೇಶ್ ಕುಮಾರ್, ನಿರೀಕ್ಷಕ ಅಜ್ಮತ್ ಆಲಿ, ಸುರತ್ಕಲ್ ಉಪನಿರೀಕ್ಷಕ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ.