ಗೌಡ ಸಂಘ ಸುಂಟಿಕೊಪ್ಪ ನಾಡುಸಂಘದ ಅಧ್ಯಕ್ಷ ಯಂಕನ ಉಲ್ಲಾಸ್ ಮಾತನಾಡುತ್ತಿರುವುದು. 
ಜಿಲ್ಲೆ

ಆಚಾರ, ವಿಚಾರ, ಸಂಸ್ಕೃತಿ ಉಳಿವಿಗೆ ಸಂಘಗಳು ಸಹಕಾರಿ

ಕುಂಜಿಲನ ಎಸ್. ಮಂಜುನಾಥ್ ಅಭಿಮತ

ಸುಂಟಿಕೊಪ್ಪ : ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ದಿಸೆಯಲ್ಲಿ ಸಹಕಾರ ಸಂಘಗಳು ಸಹಕಾರಿ ಎಂದು ಗೌಡ ಸಂಘ ಸುಂಟಿಕೊಪ್ಪ ನಾಡು ಸಂಘದ ನೂರತನ ಅಧ್ಯಕ್ಷ ಕುಂಜಿಲನ ಎಸ್. ಮಂಜುನಾಥ್ ಹೇಳಿದರು.

ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ 9ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘವು ಯಾವುದೇ ಸಂಘದ ವಿರೋಧಿಯಲ್ಲ. ನಮ್ಮ ಜನಾಂಗದ ಬೆಳವಣಿಗೆಯೊಂದಿಗೆ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ದಿಸೆಯಲ್ಲಿ ಸಂಘವನ್ನು ಸ್ಥಾಪಿಸಲಾಗಿದೆ. ಜನಾಂಗದವರ ಹಬ್ಬಗಳಾದ ಕೈಲ್ ಮುಹೂರ್ತ ಹಾಗೂ ಪುತ್ತರಿ ಹಬ್ಬಗಳನ್ನು ಒಂದು ವೇದಿಕೆಯಡಿ ಆಚರಿಸಬೇಕೆಂಬ ಇರಾದೆಯನ್ನು ಆಡಳಿತ ಮಂಡಳಿ ಹೊಂದಿದೆ ಎಂದು ತಿಳಿಸಿದರು.

ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಸಂಘವು ಭೂಮಿ ಖರೀದಿಸುವ ನಮ್ಮ ಸಂಘ, ಅಲ್ಲಿಯೇ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಲಿದೆ. ಸಂಘವನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸಲು ಸರ್ವ ಸದಸ್ಯರು ಸಲಹೆ ಮತ್ತು ಸಹಕಾರ ನೀಡುವ ಮೂಲಕ ಸಂಘವನ್ನು ಬಲಿಷ್ಠ ಸಂಘವನ್ನಾಗಿ ರೂಪಿಸೋಣ ಎಂದರು.

ಸಂಘದ ಮಾಜಿ ಅಧ್ಯಕ್ಷ ಯಂಕನ ಉಲ್ಲಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ 800ಕ್ಕೂ ಹೆಚ್ಚು ಜನ ಸದಸ್ಯತ್ವನ್ನು ಹೊಂದಿದ್ದಾರೆ. ಸಂಘದ ಪದಾಧಿಕಾರಿಗಳು 8 ವರ್ಷಗಳಿಂದಲೂ ಸಮಾಜದ ಕಟ್ಟಡ ನಿರ್ಮಿಸುವ ಇರಾದೆ ಹೊಂದಿದ್ದಾರೆ. ಸರ್ವ ಸದಸ್ಯರು ಮತ್ತಷ್ಟು ಸಹಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಕಟ್ಟಡಕ್ಕೆ ಭೂಮಿ ಖರೀದಿಸಿ ಕಟ್ಟಡ ನಿರ್ಮಾಣ ಮಾಡಿ ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸಬಹುದು ಎಂದು ತಿಳಿಸಿದರು.

ಕಾರ್ಯದರ್ಶಿ ಯಂಕನ ಕೌಶಿಕ್ ವರದಿ ವಾಚಿಸಿದರು. 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರನ್ನು ಗುರುತಿಸಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಗೆ ನೂತನ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.

ಯಂಕನ ಪ್ರಿಯಂಕಾ ಕೌಶಿಕ್, ಬಿಳಿಯಾರ ಜವಾಹರ್ (ಮಂಜು), ಬಿಳಿಯಾರ ಜಯಶೀಲಾ, ಕಡ್ಲೇರ ರತಿ ರಘು ಇದ್ದರು.