ಜಿಲ್ಲೆ

ಸಂಘದ ಸದಸ್ಯರು ಸುಳ್ಳು ಸುದ್ದಿಗೆ ಕಿವಿಗೊಡದಿರಿ

ಸುಂಟಿಕೊಪ್ಪ: ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಸಂಘದ ಸದಸ್ಯರು ಅವುಗಳಿಗೆ ಕಿವಿಗೊಡಬಾರದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಒಕ್ಕೂಟದ ಅಧ್ಯಕ್ಷೆ ಭವ್ಯಾ ಕಿವಿಮಾತು ಹೇಳಿದರು.

ಕಾನ್‌ಬೈಲ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ಒಕ್ಕೂಟ ಸಭೆ ಉದ್ದೇಶಿಸಿ ಮಾತನಾಡಿದರು.

ಫೈನಾನ್ಸ್ ಕಂಪನಿಗಳು ಎಸಗುತ್ತಿರುವ ಅಕ್ರಮ ಸಾಲ ವಸೂಲಾತಿ ಪ್ರಕರಣಗಳ ಬಗ್ಗೆ ಅವಹೇಳಕಾರಿಯಾಗಿ ಹೇಳಿಕೆಗಳು ಕೇಳಿ ಬರುತ್ತಿದ್ದು, ಅದನ್ನೇ ತಪ್ಪಾಗಿ ಅರ್ಥೈಸಿಕೊಂಡು ನಮ್ಮ ಸಂಸ್ಥೆಯ ವಿರುದ್ಧವೂ ಮಾತನಾಡಲಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಗ್ರಾಮೀಣ ಪ್ರದೇಶದ ಜನತೆಯ ಏಳಿಗೆಗಾಗಿ ಶ್ರಮಿಸುತ್ತಿರುವ ಏಕೈಕ ಸಂಘಟನೆಯಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸುಂಟಿಕೊಪ್ಪ ವಲಯದ ಮೇಲ್ವಿಚಾರಕಿ ಭವ್ಯಾ ಮಾತನಾಡಿ, ಯೋಜನೆಯ ವತಿಯಿಂದ ಸಂಪೂರ್ಣ ಸುರಕ್ಷಾ, ಆರೋಗ್ಯ ಹಾಗೂ ವಿಮೆ ಸೌಲಭ್ಯಗಳ ಕುರಿತು ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು.

ಸೇವಾ ಪ್ರತಿನಿಧಿ ಯಶೋದಾ ಮಾತನಾಡಿ, ಸಂಘದ ಸಭೆಗಳಲ್ಲಿ ಪಾಲ್ಗೊಳ್ಳುವುದರಿಂದ ವೈಯಕ್ತಿಕ ಬೆಳವಣಿಗೆ ಮತ್ತು ಶಿಸ್ತು ಸಂಯಮ ಮೂಡಿ ಬರಲಿದೆ. ಅಲ್ಲದೆ ಸಂಘದ ಸದಸ್ಯರು ನಿಯಮಗಳನ್ನು ಚಾಚು ತಪ್ಪದೆ ಪಾಲಿಸುವುದರಿಂದ ಅತ್ಯುತ್ತಮ ಸಂಘಗಳಾಗಿ ಬೆಳೆಯುವುದರೊಂದಿಗೆ ಇತರರಿಗೆ ಪ್ರೇರಣೆಯಾಗಬೇಕೆಂದು ಕಿವಿಮಾತು ಹೇಳಿದರು.

ಕಾನ್‌ಬೈಲ್ ಒಕ್ಕೂಟದ ಪದಾಧಿಕಾರಿ ಗೀತಾ, ಅರ್ಚನಾ, ಪುಷ್ಪಾಲತಾ, ಶ್ರೀಮತಿ ಇದ್ದರು.