ಚಿಕ್ಕಮಗಳೂರು: ರೈತರಿಗೆ ನೆರವಾಗುವ ಜತೆಗೆ ವ್ಯಾಪಾರಕ್ಕೂ ಅಡ್ಡಿಯಾಗದ ರೀತಿ ವ್ಯವಹಾರ ನಡೆಸಿದರೆ ಮಾತ್ರ ಕೃಷಿ ಪರಿಕರಗಳ ವ್ಯಾಪಾರಸ್ಥರು ಮುಂದಿನ ದಿನದಲ್ಲಿ ಬದುಕಲು ಸಾಧ್ಯ ಎಂದು ಕೃಷಿ ಮತ್ತು ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಹೇಳಿದರು.
ನಗರದ ಐ.ಜಿ. ರಸ್ತೆ ಸಮೀಪ ಜಿಲ್ಲಾ ಕೃಷಿ ಪರಿಕರ ಮತ್ತು ಮಾರಾಟಗಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗೊಳಿಸಿ ಮಾತನಾಡಿದರು.
ರಾಜ್ಯಾದ್ಯಂತ ಕೃಷಿ ಪರಿಕರಗಳ ವ್ಯಾಪಾರಸ್ಥರು ವ್ಯವಹಾರ ಮಾಡುತ್ತಿದ್ದರೂ ಕೆಲ ಜಿಲ್ಲೆಗಳಲ್ಲಿ ಸಂಘಟನೆಗಳೇ ಇಲ್ಲ. ರಾಜ್ಯ ಸಂಘದ ಸಹಕಾರ ಪಡೆದು ಜಿಲ್ಲಾ ಮಟ್ಟದಲ್ಲಿ ಸಂಘ ಸ್ಥಾಪಿಸಿದರೆ ವ್ಯಾಪಾರದ ಸಮಸ್ಯೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ರೂಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರತಿಯೊಂದು ಸಣ್ಣ ವ್ಯಾಪಾರಕ್ಕೂ ಸಂಘಟನೆಗಳಿದ್ದರೆ ಮಾತ್ರ ಅನ್ಯಾಯದ ವಿರುದ್ಧ ಹೋರಾಡಲು ಸಾಧ್ಯ. ಚಿಕ್ಕಮಗಳೂರಿನಲ್ಲೂ ಹಲವು ವರ್ಷಗಳಿಂದ ಕೃಷಿ ಪರಿಕರಗಳ ಸಂಘಟನೆ ಸ್ಥಾಪನೆಯಾಗಿರಲಿಲ್ಲ. ಇದೀಗ ನೂತನ ಸಂಘ ಆರಂಭವಾಗಿದೆ. ಹೀಗಾಗಿ ವ್ಯಾಪಾರಸ್ಥರು ಒಂದೆಡೆ ಸೇರಿ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಧ್ಯವಾಗುತ್ತಿದೆ ಎಂದರು.
ರಾಜ್ಯ ಕಾರ್ಯದರ್ಶಿ ಉಮಾಪತಿ ಮಾತನಾಡಿ, ಜಿಲ್ಲೆಯಲ್ಲಿ ಸಂಘದ ಸ್ವಂತ ಕಟ್ಟಡ ನಿರ್ಮಾಣ ಸಂಬಂಧ ಆಲೋಚಿಸಿ ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು. ನಿವೇಶನ ಲಭ್ಯವಾಗುವುದರಿಂದ ಅಲ್ಲಿ ಕಟ್ಟಡ ನಿರ್ಮಾಣ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.
ಸಂಘದ ರಾಜ್ಯ ಸಹ ಕಾರ್ಯದರ್ಶಿ ರಾಜು ತೋಟಪ್ಪ, ಗೌರವಾಧ್ಯಕ್ಷ ಮಹಾಬಲ, ಖಜಾಂಚಿ ಶ್ರೀಕಾಂತ್ ಶೆಟ್ಟಿ, ಕಾರ್ಯದರ್ಶಿ ಜಿ.ಸಿ.ಮನುಪ, ನಿರ್ದೇಶಕ ಡಾ. ಹಿರೇನಲ್ಲೂರು ಶಿವು ಮತ್ತಿತರರಿದ್ದರು.