ಬಾದಾಮಿ : ದೇಶದ ಗುಲಾಮಗಿರಿ ತೊಡೆದು ಹಾಕಲು ಮತ್ತು ನಮ್ಮ ಸಂಪತ್ತು ವಿದೇಶಿಯರು ಕೊಳ್ಳೆ ಹೊಡೆಯುವುದನ್ನು ತಡೆಯಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪಿಸಿದ್ದಾರೆ ಎಂದು ಮುಖ್ಯ ವಕ್ತಾರ ಶ್ರೀನಿವಾಸ ನಾಡಿಗೇರ ಹೇಳಿದರು.
ಆರ್‌ಎಸ್‌ಎಸ್ ಬಾದಾಮಿ ತಾಲೂಕು ಘಟಕದ ವತಿಯಿಂದ ವಿಜಯದಶಮಿ ನಿಮಿತ್ತ ನಗರದ ಎಸ್‌ವಿಪಿ ಸಂಸ್ಥೆಯ ಆವರಣದಲ್ಲಿ ಪಥ ಸಂಚಲನದ ಬಹಿರಂಗ ಸಭೆ ಉದ್ದೇಶಿಸಿ ಭಾನುವಾರ ಮಾತನಾಡಿದರು.
ಸಂಘ ಸ್ಥಾಪನೆ ಮಾಡಬೇಕಾದರೆ ಹೆಡಗೇವಾರ ಅವರು ಹಲವು ಮಹತ್ವ ಉದ್ದೇಶ ಹೊಂದಿದ್ದರು. ಪಶ್ಚಿಮ ಬಂಗಾಳದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ ಮರಳಿ ಬಂದ ಬಳಿಕ ನಾಗಪುರದಲ್ಲಿ ಭಾರತದ ಇತಿಹಾಸ ಅಧ್ಯಯನ ಮಾಡಿರು. ನಮ್ಮ ದೇಶ ಗುಲಾಮಗಿರಿ ಯಾಕೆ ಬಂತು? ನಮ್ಮ ಸಂಪತ್ತು ವಿದೇಶಿಯರು ಏಕೆ ಕೊಳ್ಳೆ ಹೊಡೆದರು ಅಂತ ಚಿಂತನೆ ನಡೆಸಿದರು. ನಮ್ಮ ಸಂಸ್ಕೃತಿ ಮತ್ತು ಪರಂಪರೆ ಮರು ಸ್ಥಾಪಿಸಲು ಹೊಸ ಶಕ್ತಿ ಹುಟ್ಟು ಹಾಕಿದರು ಎಂದರು.
ನಮ್ಮ ಈ ಸ್ಥಿತಿಗೆ ನಾವೇ ಕಾರಣ ಅಂತ ತಿಳಿದುಕೊಂಡು ಹಿಂದುಗಳ ಉನ್ನತಿಗಾಗಿ, ಸನಾತನವಾದ ವೈಭವ ಮರುಕಳಿಸಲು 1925ರ ವಿಜಯದಶಮಿ ದಿನ ಸಂಘವನ್ನು ನಾಗಪುರದ ಮೋಹಿತವಾಡ ಎಂಬಲ್ಲಿ ಪ್ರಾರಂಭಿಸಿದರು. ಕರ್ನಾಟಕದಲ್ಲಿ 1935ರಲ್ಲಿ ಯಾದವರಾಜ ಜೋಶಿ ಅವರು ಚಿಕ್ಕೋಡಿಯಲ್ಲಿ ಶಾಖೆ ಆರಂಭಿಸಿದರು. ಮುಂದೆ ಇಡೀ ದೇಶದಲ್ಲಿ ಸಂಘದ ಶಾಖೆಗಳು ಪ್ರಾರಂಭವಾಗಿ ಸಮಾಜಮುಖಿ ಕೆಲಸಗಳು ಇಂದಿಗೂ ನಡೆದುಕೊಂಡು ಬಂದಿವೆ ಎಂದು ತಿಳಿಸಿದರು.
ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸೈನಿಕ ರಂಗನಗೌಡ ಗೌಡರ, ಚಂದ್ರಶೇಖರ, ಹಾಜರಿದ್ದರು.