ಹೊಸಪೇಟೆ ಸಿಡಿಪಿಒ ಕಚೇರಿ ಎದುರು ಅಂಗನವಾಡಿ ನೌಕರರ ಸಂಘ ತಾಲೂಕು ಸಮಿತಿ ಸೋಮವಾರ ನಿರಶನ ನಡೆಸಿತು. 
ಜಿಲ್ಲೆ

ಸಹಾಯಕಿಯರ ನಿಯೋಜನೆಗೆ ಪಟ್ಟು: ಹೊಸಪೇಟೆಯಲ್ಲಿ ಅಂಗನವಾಡಿ ನೌಕರರ ಸಂಘ ನಿರಶನ

Ballari

ಹೊಸಪೇಟೆ: ಬಾಲವಾಡಿಗಳಿಗೆ ಸಹಾಯಕಿಯನ್ನು ನಿಯೋಜಿಸುವವರೆಗೂ ಅಡುಗೆ ಮಾಡುವುದಿಲ್ಲವೆಂದು ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕು ಸಮಿತಿ ಸದಸ್ಯರು ಸೋಮವಾರ ನಗರದ ಸಿಡಿಪಿಒ ಕಚೇರಿ ಮುಂದೆ ನಿರಶನ ನಡೆಸಿದರು.

ರಾಜ್ಯ ಸರ್ಕಾರ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ. ನಿವೃತ್ತ ಅಂಗನವಾಡಿ ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ ಮೊತ್ತ ಹಾಗೂ ನಿವೃತ್ತಿ ಸೌಲಭ್ಯಗಳನ್ನು ನೀಡದೆ, ಹೆಸರಿಗಷ್ಟೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬಜೆಟ್ ಮಂಡಿಸಿದೆ ಎಂದು ಸದಸ್ಯರು ದೂರಿದರು.

ಸಂಘಟನೆಯ ತಾಲೂಕು ಅಧ್ಯಕ್ಷೆ ಕೆ.ನಾಗರತ್ನ ಮಾತನಾಡಿ, ರಾಜ್ಯ ಬಜೆಟ್ ಅನ್ನು ಸಂಘಟನೆ ಖಂಡಿಸುತ್ತದೆ. ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಅನೇಕ ಬಾರಿ ಹೋರಾಟಗಳನ್ನು ನಡೆಸಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಬಜೆಟ್ ಅಂತಿಮಗೊಳಿಸುವುದರೊಳಗೆ ಇಲಾಖೆ ಶಿಫಾರಸುಗಳನ್ನು ಸೇರ್ಪಡೆ ಮಾಡಬೇಕು. ನಿರ್ಲಕ್ಷಿಸಿದಲ್ಲಿ ಇ-ಸರ್ವೇ, ಬಿಪಿಎಲ್, ಆರ್‌ಸಿಎಚ್ ಸರ್ವೇ, ಭಾಗ್ಯಲಕ್ಷ್ಮೀ, ಮಾತೃವಂದನಾ, ಮಾತೃಶ್ರೀ, ಸ್ತ್ರೀಶಕ್ತಿ, ಚುನಾವಣಾ ಇತರ ಕೆಲಸಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು.