ಮನೆ ಕಳೆದುಕೊಂಡ ಸಂತ್ರಸ್ತರ ಕುಟುಂಬಕ್ಕೆ ರೋಟರಿ ಸಂಸ್ಥೆ ವತಿಯಿಂದ ದಿನಸಿ ಸೇರಿದಂತೆ ಸಾಮಾನು ಸರಂಜಾಮು ನೀಡುವ ಮೂಲಕ ಮಾನವೀಯತೆ ಮೆರೆಯಿತು. ರೋಟರಿ ಅಧ್ಯಕ್ಷ ಡಾ.ಪ್ರಸನ್ನ, ಕಾರ್ಯದರ್ಶಿ ಕೃಷ್ಣಕುಮಾರ್, ನಿಕಟಕಪೂರ್ವ ಅಧ್ಯಕ್ಷ ಚನ್ನಕೇಶವ, ಸದಸ್ಯರಾದ ಸಂತೋಷ್‌ಕುಮಾರ್, ಶಾಮಣ್ಣ ಇತರರಿದ್ದರು. 
ಜಿಲ್ಲೆ

ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೆರವು

ರವಿಕುಮಾರ್ ಪಿ. ಕೆ

ಹುಣಸೂರು: ಬೆಂಕಿ ಅವಘಡದಿಂದ ಇಬ್ಬರು ಆದಿವಾಸಿಗಳ ಮನೆ ಸಂಪೂರ್ಣ ನಾಶವಾಗಿದ್ದು, ಮನೆ ಮಳೆದುಕೊಂಡ ಸಂತ್ರಸ್ತರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ತಾತ್ಕಾಲಿಕವಾಗಿ ತಲಾ 10 ಸಾವಿರ ರೂ. ಆರ್ಥಿಕ ನೆರವು ನೀಡಿದರು. ಇನ್ನು ಹುಣಸೂರು ರೋಟರಿ ಸಂಸ್ಥೆ ಸಂತ್ರಸ್ತ ಕುಟುಂಬಕ್ಕೆ ಅಗತ್ಯವಾದ ಸಾಮಾಜು ಸರಂಜಾಮು, ದಿನಸಿಯನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದಿದೆ.

ಕಳೆದ ಶನಿವಾರ ಸಂಜೆ ತಾಲೂಕಿನ ಹನಗೋಡು ಹೋಬಳಿ ಹೆಮ್ಮಿಗೆ ಹಾಡಿಯ ನಿವಾಸಿ ಚಿನ್‌ಸಾಕಯ್ಯ ಮತ್ತು ಇವರ ಪುತ್ರ ಕಣಿಯಪ್ಪ ಅವರ ಎರಡೂ ಮನೆಗಳು ಬೆಂಕಿಗೆ ಆಹುತಿಯಾಗಿದ್ದವು. ಅಕ್ಕಪಕ್ಕದವರು ಬೆಂಕಿ ನಂದಿಸಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ಕುಟುಂಬದವರೆಲ್ಲರೂ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಘಟನೆ ಸಂಭವಿಸಿದ್ದು, ಮನೆಯಲ್ಲಿದ್ದ ದಿನಸಿ, ಪಾತ್ರೆ, ಆಧಾರ್ ಕಾರ್ಡ್‌ಗಳು ಸೇರಿದಂತೆ ಎಲ್ಲವೂ ಸುಟ್ಟುಹೋಗಿವೆ.

ವಿಷಯ ತಿಳಿದ ಶಾಸಕ ಜಿ.ಡಿ.ಹರೀಶ್‌ಗೌಡ ತಕ್ಷಣಕ್ಕೆ ಗುಡಿಸಲು ನಿರ್ಮಿಸಿಕೊಳ್ಳಲು ಆರ್ಥಿಕ ಸಹಾಯವನ್ನು ನೀಡಿದರು. ಗಿರಿಜನ ಕಲ್ಯಾಣ ಅಧಿಕಾರಿಗೆ ವಸತಿ ಸೌಲಭ್ಯ ಸೇರಿದಂತೆ ಇತರ ಸೌಲಭ್ಯಗಳನ್ನು ಆದ್ಯತೆ ಮೇಲೆ ಒದಗಿಸುವಂತೆ ನಿರ್ದೇಶಿಸಿದರು.

ಸಹಾಯಹಸ್ತ ಚಾಚಿದ ರೋಟರಿ: ರೋಟರಿ ಅಧ್ಯಕ್ಷ ಡಾ.ಪ್ರಸನ್ನಕುಮಾರ್ ಮತ್ತವರ ತಂಡ ಮನೆ ಕಳೆದುಕೊಂಡ ಕುಟುಂಬಗಳಿಗೆ 30 ಸಾವಿರ ರೂ.ಗೂ ಹೆಚ್ಚು ಮೌಲ್ಯದ ಪಾತ್ರೆಗಳು, ಚಾಪೆ, ಹಾಸಿಗೆ, ಬೆಡ್‌ಶೀಟ್‌ಗಳು, ದಿನಸಿ ಪದಾರ್ಥಗಳು, ಬಟ್ಟೆಬರೆ, ಬಿಂದಿಗೆ, ಬಕೆಟ್, ಊಟದ ತಟ್ಟೆ, ಲೋಟ ಮುಂತಾದವುಗಳನ್ನು ವಿತರಿಸಿದರು.

ರೋಟರಿಯ ನಿಸ್ವಾರ್ಥ ಸೇವೆಯನ್ನು ಮನೆ ಕಳೆದುಕೊಂಡ ಕುಟುಂಬ ಸ್ಮರಿಸಿತು. ಕರಣಕುಪ್ಪೆ ಗ್ರಾ.ಪಂ.ಅಧ್ಯಕ್ಷ ಪಾಪಣ್ಣ ಪಂಚಾಯಿತಿ ವತಿಯಿಂದ ಕುಟುಂಬಕ್ಕೆ ಮನೆ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು.