ಜಿಲ್ಲೆ

ಹೃದಯಾಘಾತಕ್ಕೆ ಬಲಿಯಾದ ಬಾಲಕನ ಕುಟುಂಬಕ್ಕೆ ನೆರವು

ನರಗುಂದ: ಹೃದಯಾಘಾತದಿಂದ ಮೃತಪಟ್ಟಿರುವ ಪಟ್ಟಣದ ತೋಟದಕೇರಿ ಬಡಾವಣೆಯ ವಿದ್ಯಾರ್ಥಿ ಕುಟುಂಬಕ್ಕೆ ಕಂದಾಯ, ಕಾರ್ಮಿಕ, ಪುರಸಭೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಬುಧವಾರ ಭೇಟಿ ನೀಡಿದರು.

ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಅವರ ಸೂಚನೆ ಮೇರೆಗೆ ವಿವಿಧ ಬೇಡಿಕೆ ಈಡೇರಿಸಲು ಮುಂದಾಗಿದ್ದು, ದೃಷ್ಟಿಹೀನ ತಂದೆ, ಅಶಕ್ತ ತಾಯಿ ಬಾಳಲ್ಲಿ ಮಂದಹಾಸದ ಬೆಳಕು ಮೂಡಿದಂತಾಗಿದೆ.

ಹೃದಯಾಘಾತಕ್ಕೆ ಬಲಿಯಾಗಿರುವ ರಿಯಾಜ್‌ಅಹ್ಮದ್‌ನ ತಂದೆ-ತಾಯಿ, ಸಹೋದರ, ಸಹೋದರಿ ಸೇರಿದಂತೆ ಕುಟುಂಬದ 5 ಜನರನ್ನು ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆಯಲ್ಲಿ ಹೃದ್ರೋಗ ಸೇರಿ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಯಿತು. ತಾಯಿ ಶೈನಾಜ್‌ಗೆ ಇಸಿಜಿಯಲ್ಲಿ ಸ್ವಲ್ಪ ಸಮಸ್ಯೆ ಕಂಡು ಬಂದಿದ್ದರಿಂದ ಅವರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಅಂಬುಲೆನ್ಸ್‌ನಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು ತಜ್ಞ ವೈದ್ಯರಿಂದ ಹೃದಯ, ಥೈರಾಯ್ಡ ಹಾಗೂ ವಿವಿಧ ಕಾಯಿಲೆಗಳ ತಪಾಸಣೆ ನಡೆಸಲಾಗುತ್ತಿದೆ.

ಕಣ್ಣು ಕಾಣದ ವಿದ್ಯಾರ್ಥಿ ತಂದೆ ಮಕ್ತುಂಹುಸೇನ ಅವರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಬೇಕಾದ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಆಕಸ್ಮಾತ್ ದೃಷ್ಟಿ ಬಾರದಿದ್ದರೆ ಆತನಿಗೆ ಆರೋಗ್ಯ ಇಲಾಖೆಯಿಂದ ಅಂಧತ್ವ ಪ್ರಮಾಣ ಪತ್ರ ನೀಡಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಅಂಧತ್ವ ಪ್ರಮಾಣ ಪತ್ರ ನೀಡಿದ ಒಂದು ವಾರದೊಳಗೆ ಮಾಸಾಶನ ವಿತರಣೆಗೆ ಕಾನೂನು ಕ್ರಮ ಕೈಗೊಳ್ಳಬೇಕು.

ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬದ ಜವಾಬ್ದಾರಿ ಅಪ್ರಾಪ್ತೆ ಮುಮ್ತಾಜ್‌ಳ ಹೆಗಲೇರಿರುವುದರಿಂದ ಕಾರ್ಮಿಕ ಇಲಾಖೆ ಅಧಿಕಾರಿಗಳು ಬಾಲಕಿಯ ತಂದೆ-ತಾಯಿಗೆ ಕಾರ್ಮಿಕರ ಕಾರ್ಡ್‌ಗಳನ್ನು ನೀಡಿ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ವಿತರಿಸಬೇಕು. ಶಿಕ್ಷಣ ಇಲಾಖೆಯಿಂದ ನೊಂದ ಕುಟುಂಬ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಉಚಿತ ಪಠ್ಯ-ಪುಸ್ತಕ, ಸಮವಸ್ತ್ರ ವಿತರಣೆಗೆ ವಿಶೇಷ ಕಾಳಜಿ ವಹಿಸಬೇಕು. ಸಣ್ಣ ವಯಸ್ಸಿನಲ್ಲಿ ಶಿಕ್ಷಣ ತೊರೆಯಲು ಮುಂದಾಗಿರುವ ಮುಮ್ತಾಜ್‌ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕೌನ್ಸೆಲಿಂಗ್ ಮಾಡಿಸಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು ಉಚಿತ ವಸತಿ, ಗುಣಮಟ್ಟದ ಶಿಕ್ಷಣ ಕೊಡಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಸಬೇಕು.

ಪುರಸಭೆ ಅಧಿಕಾರಿಗಳು ಸ್ವಂತ ನಿವೇಶನ ಅಥವಾ ಮನೆ ಮಂಜೂರಾತಿ ಮಾಡಿಸಲು ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರಿಂದ ಎಲ್ಲ ಇಲಾಖೆ ಅಧಿಕಾರಿಗಳು ಮೃತ ವಿದ್ಯಾರ್ಥಿ ಕುಟುಂಬಕ್ಕೆ ಭೇಟಿ ನೀಡಿ ಸಹಾಯಕ್ಕೆ ಮುಂದಾದರು.

ಆರ್ಥಿಕ ನೆರವು: ನರಗುಂದ ಹೊರಕೇರಿ ಓಣಿಯ ಮುಸ್ಲಿಂ ಸಮಾಜದ ಗುರು-ಹಿರಿಯರು, ಯುವಕ ಮಂಡಳ ಸದಸ್ಯರು ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ 31.500 ರೂ. ಹಾಗೂ ವಿನಾಯಕನಗರ ಯುವಕ ಮಂಡಳ ಸದಸ್ಯರಿಂದ 7.500 ರೂ. ನೀಡಲಾಯಿತು.