ಜಿಲ್ಲೆ

ಹೈನುಗಾರಿಕೆಯಿಂದ ರೈತರಿಗೆ ನೆರವು

Assistance to farmers from dairy farming

ಕೋಚಿಮುಲ್​ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್​.ನಾಗರಾಜ್​ ಹೇಳಿಕೆ

ಮುಳಬಾಗಿಲು: ರಾಜ್ಯ ಸರ್ಕಾರ ಲೀಟರ್​ ಹಾಲಿಗೆ 5 ರೂ.ಹೆಚ್ಚಿಸಿ ಈ ಪೂರ್ಣ ಹಣವನ್ನು ಹಾಲು ಉತ್ಪಾದಕರಿಗೆ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ರೈತರು ಸಂಕಷ್ಟದಲ್ಲಿದ್ದು, ಇದರಿಂದ ಒಂದಷ್ಟು ಸುಧಾರಣೆ ಕಾಣಬಹುದು ಎಂದು ಕೋಚಿಮುಲ್​ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್​.ನಾಗರಾಜ್​ ಹೇಳಿದರು.
ತಾಲೂಕಿನ ಬ್ಯಾಟನೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಮಳೆ ಇಲ್ಲದೆ ಬಿತ್ತಿದ ಬೆಳೆ ಒಣಗಿ ಹೋಗುತ್ತಿದ್ದು, ರೈತ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗ ಏನಿದ್ದರೂ ಅವನ ಕೈ ಹಿಡಿತಿರುವುದು ಹೈನುಗಾರಿಕೆ. ಡೇರಿಗಳಿಗೆ ಹಾಲು ಪೂರೈಕೆ ಮಾಡುತ್ತಿರುವುದರಿಂದ 15 ದಿನಕೊಮ್ಮೆ ಕಾಸು ಕೈ ಸೇರುತ್ತದೆ. ಇದರಿಂದ ಒಂದಷ್ಟು ಉಸಿರಾಡಲು ಸಾಧ್ಯವಾಗಿದೆ. ಹಾಲಿನ ಉತ್ಪಾದನಾ ವೆಚ್ಚವು ಸಹ ರೈತನಿಗೆ ಸಿಗುತ್ತಿಲ್ಲ. ಈ ಸಮಯದಲ್ಲಿ ಸರ್ಕಾರ ಹೇಳಿರುವ ಲೀಟರ್​ ಹಾಲಿಗೆ 5 ರೂ. ಹೆಚ್ಚಿಸುವ ಘೋಷಣೆ ಶ್ರೀ ಜಾರಿಯಾಗಬೇಕು ಎಂದು ಒತ್ತಾಯಿಸಿದರು.


ಬ್ಯಾಟನೂರು ಡೇರಿಯ ಆಡಳಿತ ಮಂಡಳಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು, ಮುಂದೆ ಸ್ವಂತ ಕಟ್ಟಡ ಕಟ್ಟಿಕೊಳ್ಳಲು ಕಾಮಗಾರಿ ಪ್ರಾರಂಭಿಸಿದರೆ ಹಾಲು ಒಕ್ಕೂಟದಿಂದ 3.5 ಲಕ್ಷ, ಕೆಎಂಎಫ್​ನಿಂದ 4 ಲಕ್ಷ, ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ 3 ಲಕ್ಷ ರೂ. ಕೊಡಿಸಲಾಗುವುದು, ಉಳಿದಂತೆ ಸ್ಥಳಿಯ ದಾನಿಗಳ ನೆರವು ಪಡೆದು ಸಹಕಾರಿ ಭವನ ಕಟ್ಟಿಕೊಳ್ಳಬೇಕು ಎಂದರು. ಬ್ಯಾಟನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್​.ಶ್ರೀನಿವಾಸ್​ ಮಾತನಾಡಿ, ಡೇರಿಗೆ ವಾರ್ಷಿಕವಾಗಿ 2.65 ಲಕ್ಷ ಲಾಭ ಬರುತ್ತಿದೆ. 79 ಲಕ್ಷ ವಾಹಿವಾಟು ನಡೆಸಿದ್ದು, 74 ಲಕ್ಷ ರೂ. ರೈತರ ಹಾಕಿದ ಹಾಲಿಗೆ ನೀಡಲಾಗಿದೆ. ಬೋನಸ್​ 100 ರೂ.ಗೆ 1.50 ರೂ ನಂತೆ ವಿತರಿಸಲು ಅವಕಾಶವಿದೆ ಎಂದರು.


ಜೆಡಿಎಸ್​ ಮುಖಂಡ ಎಂ.ಗೊಲ್ಲಹಳ್ಳಿ ಮತ್ತು ಕೆ.ಪಿ.ಪ್ರಭಾಕರ್​, ಕೋಚಿಮುಲ್​ನ ಉಪಕಚೇರಿಯ ಉಪ ವ್ಯವಸ್ಥಾಪಕ ಡಾ.ಕೆ.ಕಿರಣ್​, ವಿಸ್ತೀರ್ಣಾಧಿಕಾರಿಗಳಾದ ಆರ್​.ಜಿ.ಶ್ರೀನಿವಾಸ್​, ಪುರುಷೋತ್ತಮ್​ರೆಡ್ಡಿ, ಚಂದ್ರಶೇಖರ್​, ಕೃಷಿ ಅಧಿಕಾರಿ ರವಿಕುಮಾರ್​, ಮುಖಂಡರಾದ ಬಿ.ಎನ್​.ಸುಬ್ರಹ್ಮಣಿ, ಎ.ಎನ್​.ರೆಡ್ಡಪ್ಪ, ಚಂಗಲರಾಯಪ್ಪ, ಪಿ.ಎಸ್​.ವರದರಾಜಪ್ಪ, ಬ್ಯಾಟನೂರು ಡೇರಿ ಉಪಾಧ್ಯಕ್ಷ ಎನ್​.ವೇಣುಗೋಪಾಲ್​, ನಿರ್ದೇಶಕರಾದ ಪಿ.ಎಸ್​.ವೆಂಕಟರಮಣಪ್ಪ, ಎಸ್​.ದೇವರಾಜು, ಪಿ.ಸೋಮಶೇಖರ, ರಘುರಾಮಯ್ಯ, ಕೆ.ವೇಣುಗೋಪಾಲ್​, ಎನ್​.ವೆಂಕಟರಮಣಪ್ಪ ಇದ್ದರು.