ಜಿಲ್ಲೆ

ರಸ್ತೆ ಅತಿಕ್ರಮಣ ತೆರವಿಗೆ ಸಹಕಾರ ನೀಡಿ

ರವಿ ಎಸ್. ಬಳೂಟಗಿ

ರೋಣ: ಪಟ್ಟಣದ ಅಭಿವೃದ್ಧಿ ಹಾಗೂ ಸುಗಮ ವಾಹನ ಸಂಚಾರಕ್ಕಾಗಿ ರಸ್ತೆ ವಿಸ್ತರಣೆ ಅವಶ್ಯವಾಗಿದ್ದು, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಿಪಿಐ ಎಸ್.ಎಸ್. ಬೀಳಗಿ ಹೇಳಿದರು.
ಪೊಲೀಸ್ ಠಾಣೆಯಲ್ಲಿ ಗುರುವಾರ ಬೀದಿಬದಿ ವ್ಯಾಪಾರಸ್ಥರ ಸಭೆ ನಡೆಸಿದ ಅವರು, ರೋಣ ಪಟ್ಟಣದ ಅಭಿವೃದ್ಧಿಯತ್ತ ಸಾಗಬೇಕು. ರಸ್ತೆ ವಿಸ್ತರಣೆಯಾದರೆ ಪ್ರಗತಿಯತ್ತ ಸಾಗಲು ಅನುಕೂಲವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಮಸ್ಯೆಗಳು ಉದ್ಭವಿಸುವುದು ಸಹಜ. ಪ್ರಗತಿಗೆ ಅಡ್ಡಗಾಲು ಹಾಕದೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಪುರಸಭೆಯ ಮುಖ್ಯಾಧಿಕಾರಿ ಎಸ್.ಬಿ. ಗೋಂದಕರ ಮಾತನಾಡಿ, 30 ವರ್ಷದ ಹಿಂದಿನ ಪಟ್ಟಣ ಈಗಿಲ್ಲ. ಸಾಕಷ್ಟು ಬದಲಾವಣೆಗಳಾಗಿವೆ. ದಿಢೀರ್‌ನೆ ಸುಧಾರಣೆ ಮಾಡಿ ಎಂದರೆ ಹೇಗೆ ಎಂದು ಅಸಹಾಯಕತೆ ತೋಡಿಕೊಂಡರು.
ರೋಣ ಲೋಕೋಪಯೋಗಿ ಇಲಾಖೆ ಎಇಇ ಬಲವಂತ ನಾಯಕ ಮಾತನಾಡಿ, ಸುಗಮ, ಸುರಕ್ಷಿತ ವಾಹನ ಸಂಚಾರಕ್ಕಾಗಿ ರಸ್ತೆ ಅತಿಕ್ರಮಣ ಕೊಡಲೇ ತೆರವುಗೊಳಿಸಲಾಗುವುದು. ಬೀದಿಬದಿ ವ್ಯಾಪರಸ್ಥರು ಸ್ವಯಂಪ್ರೇರಿತವಾಗಿ ರಸ್ತೆ ಅತಿಕ್ರಮಣ ತೆರವಿಗೆ ಸಹಕರಿಸಬೇಕು ಎಂದರು. ಪಿಎಸ್‌ಐ ಪ್ರಕಾಶ ಬಣಕಾರ, ವಿಜಯಲಕ್ಷ್ಮೀ ಹಿರೇಮಠ, ಸುಧಾಕರ ಗೋಟೂರ, ವೀರಪ್ಪ ತೆಗ್ಗಿನಮನಿ, ಬೀದಿಬದಿ ವ್ಯಾಪಾರಸ್ಥರು, ಆಟೋ, ಕಾರು ಚಾಲಕರು/ ಮಾಲೀಕರು ಹಾಜರಿದ್ದರು.

ಪರ್ಯಾಯ ವ್ಯವಸ್ಥೆಗೆ ಮನವಿ: ಪಟ್ಟಣದ ಅಭಿವೃದ್ಧಿ ಆಗಬೇಕು ಎನ್ನುವುದು ನಮ್ಮೆಲ್ಲರ ಇಚ್ಛೆಯಾಗಿದೆ. ನಮಗೆ ವ್ಯಾಪಾರ ಮಾಡಲು ಸೂಕ್ತ ಸ್ಥಳ ಒದಗಿಸಿಕೊಡಬೇಕು, ನಿತ್ಯ ದುಡಿದು ಬದುಕು ಕಟ್ಟಿಕೊಳ್ಳುವ ಜನರು ನಾವು. ವ್ಯಾಪಾರಕ್ಕೆ ಅನುಕೂಲವಾಗಿರುವ, ಜನರು ಓಡಾಡುವ ಸ್ಥಳ ನೀಡಿದರೆ ಒಳ್ಳೆಯದಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದರು.