ಕೋಲಾರ: ಶಾಲೆಗಳ ಶಿಕ್ಷಣದ ಉತ್ತೇಜನಕ್ಕಾಗಿ ಒಂದೆಡೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಶಿಕ್ಷಕರ ಗುಂಪುಗಾರಿಕೆ, ಕಳ್ಳಾಟ, ಶಿಕ್ಷಣ ಇಲಾಖೆಯ ಎಡವಟ್ಟುಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಮೌಲ್ಯ ಕುಸಿಯುತಿದ್ದು ಆತಂಕಗೊಂಡ ಪಾಲಕರು ಲಕ್ಷಾಂತರ ರೂ. ಖರ್ಚು ಮಾಡಿ, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂತಾಗಿದೆ.
ಇದಕ್ಕೆ ತಾಜಾ ಉದಾಹರಣೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊದಲಿ ಪಂಚಾಯಿತಿ ಕೋಡಿಪಲ್ಲಿ ಗ್ರಾಮದಲ್ಲಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಈ ಶಾಲೆ ಮಕ್ಕಳಿಲ್ಲದ ಕಾರಣ 2 ವರ್ಷಗಳ ಹಿಂದೆಯೇ ಮುಚ್ಚಲ್ಪಟ್ಟಿದೆ. ಆದರೆ ಈಗ ಈ ಶಾಲೆಗೆ ಶಿಕ್ಷಕರೊಬ್ಬರು ನೇಮಕಗೊಂಡಿದ್ದಾರೆ. ಇಂಥ ಶಾಲೆಗೆ ಸ್ಥಳ ನಿಯುಕ್ತಿಗೊಂಡಿರುವ ಶಿಕ್ಷಕ ಈಗ ಸುಖಾಸುಮ್ಮನೆ ಅಲೆಯುವಂತಾಗಿದೆ. ಇದರಿಂದ ಸರ್ಕಾರಿ ಬೊಕ್ಕಸಕ್ಕೂ ಆರ್ಥಿಕ ನಷ್ಟ ಉಂಟುಮಾಡಿದಂತಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದ ಸಾಮಾನ್ಯ ವರ್ಗಾವಣೆಯಲ್ಲಿ ಹುದ್ದೆ ತೋರಿಸಿದ ಕಾರಣ ಶಿಕ್ಷಕರು ಸ್ಥಳ ನಿಯುಕ್ತಿ ಮಾಡಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯ ಈ ಎಡವಟ್ಟು ಈಗ ಚರ್ಚೆಗೆ ಗ್ರಾಸವಾಗಿದೆ.
ಇನ್ನೊಂದೆಡೆ ಶ್ರೀನಿವಾಸಪುರ ತಾಲೂಕಿನಲ್ಲಿ ಹೆಚ್ಚು ಮಕ್ಕಳಿರುವ ತಾಡಿಗೋಳ್ ಹಿರಿಯ ಪ್ರಾಥಮಿಕ ಶಾಲೆ, ಪಟ್ಟಣದ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸರೋಜಿ ರಸ್ತೆಯ ಹಿರಿಯ ಪ್ರಾಥಮಿಕ ಶಾಲೆ, ಯಲ್ದೂರು, ಅಡ್ಡಗಲ್ ಸೇರಿ ಸುಮಾರು 20 ಶಾಲೆಗಳಲ್ಲಿ 100 ಕ್ಕೂ ಹೆಚ್ಚು ಮಕ್ಕಳ ಹಾಜರಾತಿ ಇದ್ದರೂ ಅಂತಹ ಶಾಲೆಗಳಿಗೆ ಅವಶ್ಯವಿದ್ದರೂ ಶಿಕ್ಷಕರನ್ನು ನಿಯೋಜನೆಗೊಳಿಸಿಲ್ಲ.
ಅಲ್ಲೂ ಹೀಗೇ ಆಗಿತ್ತು…
2023&-24ನೇ ಸಾಲಿನಲ್ಲಿ ಮುಳಬಾಗಿಲು ತಾಲೂಕಿನ ಬೇವಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಮಕ್ಕಳಿಲ್ಲದ ಕಾರಣ ಶಾಲೆಯನ್ನು ಮುಚ್ಚಿ ಸದರಿ ಶಾಲೆಯಲ್ಲಿದ್ದ ಮೂವರು ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜನೆಗೊಳಿಸಲಾಗಿತ್ತು. ಆದರೂ ಕಳೆದ ವರ್ಷ ನಡೆದ ಸಾಮಾನ್ಯ ವರ್ಗಾವಣೆಯಲ್ಲಿ ಮುಚ್ಚಲ್ಪಟ್ಟ ಶಾಲೆಗೆ ಇಬ್ಬರು ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಇಲ್ಲಿಯೂ ಸಹ ಶಿಕ್ಷಣ ಇಲಾಖೆಯ ಎಡವಟ್ಟಿನಿಂದಾಗಿ ಕೆಲವು ದಿನಗಳ ನಂತರ ಸದರಿ ಶಿಕ್ಷಕರನ್ನು ಮಕ್ಕಳಿರುವ ಬೇರೆ ಶಾಲೆಗೆ ಇಲಾಖೆ ನಿಯೋಜನೆಗೊಳಿಸಿತ್ತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 4 ಜನ ಮಕ್ಕಳು ಶಾಲೆಗೆ ಬಂದ ಕಾರಣ ಶಾಲೆ ಮತ್ತೆ ಆರಂಭಿಸಲಾಗಿದ್ದು, ನಿಯೋಜನೆಗೊಂಡಿದ್ದ ಶಿಕ್ಷಕರು ಈಗ ಇದೇ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾಲ್ವರು ಮಕ್ಕಳಿಗೆ ಇಬ್ಬರು ಶಿಕ್ಷಕರಿದ್ದಾರೆ. ಜಿಲ್ಲಾದ್ಯಂತ ಇದೇ ರೀತಿ ಮುಚ್ಚಲ್ಪಟ್ಟಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಯ ರ್ನಿಲಕ್ಷ$್ಯದಿಂದಾಗಿ ವರ್ಗಾವಣೆ ಸಮಯದಲ್ಲಿ ಕಾಯ್ದಿರಿಸದೇ ಇರುವುದರಿಂದ ಅಂತಹ ಶಾಲೆಗಳಿಗೂ ಶಿಕ್ಷಕರು ನಿಯುಕ್ತಿಗೊಳ್ಳುವಂತಹ ಪರಿಸ್ಥಿತಿ ನಿಮಾರ್ಣವಾಗಿದೆ. ಇಂತಹ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳಲು ಕೆಲವು ಶಿಕ್ಷಕರು ಕಾಯುತ್ತಿರುತ್ತಾರೆ. ಪಾಠ ಮಾಡದೆ ಕಾಲಹರಣ ಮಾಡಲು ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ
ಕೇಳಿ ಬರುತ್ತಿವೆ.
ಮಾಹಿತಿ ನೀಡಲು ಬಿಇಒ ನಕಾರ
ಮಕ್ಕಳಿಲ್ಲದೆ ಮುಚ್ಚಲ್ಪಟ್ಟಿರುವ ಶಾಲೆಗೆ 3 ವರ್ಷಗಳ ಕಾಲ ಶಿಕ್ಷಕರ ಹುದ್ದೆ ಬ್ಲಾಕ್ ಲಿಸ್ಟಿಗೆ ಹಾಕುವಂತಿಲ್ಲ. ವರ್ಗಾವಣೆ ವೇಳೆ ಸದರಿ ಶಾಲೆಯ ಹುದ್ದೆ ತೋರಿಸಬೇಕಾಗುತ್ತದೆ. ಆ ಹುದ್ದೆಗೆ ಕೌನ್ಸೆಲಿಂಗ್ನಲ್ಲಿ ಸ್ಥಳ ನಿಯುಕ್ತಿಗೊಳ್ಳುವ ಶಿಕ್ಷಕನನ್ನು ನಿಯೋಜನೆ ಮೇರೆಗೆ ಮಕ್ಕಳಿರುವ ಬೇರೆ ಶಾಲೆಗೆ ಕಳುಹಿಸಿಕೊಡಲಾಗುತ್ತದೆ. 10 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳಲ್ಲಿರುವ ಶಿಕ್ಷಕರ ಮಾಹಿತಿ ನೀಡಲು ನಿರಾಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಲಕ್ಷ$್ಮಯ್ಯ ನಾನು ಕಚೇರಿಯಲ್ಲಿಲ್ಲ. ಕಚೇರಿಗೆ ಬಂದ ನಂತರ ಮಾಹಿತಿ ನೀಡುತ್ತೇನೆ ಎಂದು ದೂರವಾಣಿ ಸಂಪರ್ಕ ಕಡಿತಗೊಳಿಸಿದರು.
ಹಲವೆಡೆ 10 ಮಕ್ಕಳೂ ಇಲ್ಲ
ಶ್ರೀನಿವಾಸಪುರ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರವೇ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಹಾಜರಾತಿ ಇರುವ ಶಾಲೆಗಳು 50 ರಿಂದ 60 ಇದ್ದು, ಸದರಿ ಶಾಲೆಗಳಲ್ಲಿ ಇಬ್ಬಿಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯ ನಿಯಮಾನುಸಾರ 11 ಮಕ್ಕಳಿದ್ದ ಶಾಲೆಗೆ ಇಬ್ಬರು ಶಿಕ್ಷಕರು ಇರಬೇಕೆಂದು ಆದೇಶವಿದೆ. ಆದರೆ ಅನೇಕ ಶಾಲೆಗಳಲ್ಲಿ 10 ಮಕ್ಕಳಿಗಿಂತ ಕಡಿಮೆ ದಾಖಲಾತಿ ಇದೆ. ಶಿಕ್ಷಕರು ಉಳಿದುಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಪ್ರತಿ ದಿನ ಹಾಜರಾತಿಯಲ್ಲಿ ಮಾತ್ರ ಕಡಿಮೆ ಮಕ್ಕಳ ಸಂಖ್ಯೆ ಕಂಡುಬರುತ್ತಿದೆ ಎಂದು ಶಿಕ್ಷಕರ ವಲಯಗಳಿಂದಲೇ ಕೇಳಿ ಬರುತ್ತಿದೆ.
ಶಿಕ್ಷಕರಿಬ್ಬರ ಜಗಳದಿಂದ ಶಾಲೆ ಬಂದ್
ತಾಲೂಕಿನ ಲಕ್ಷಿ$್ಮಪುರ ಪಂಚಾಯಿತಿ, ಪಾತಕೋಟೆ ಗ್ರಾಮದಲ್ಲಿ ಇಬ್ಬರು ಮಕ್ಕಳಿಗೆ ಇಬ್ಬರು ಶಿಕ್ಷಕರಿದ್ದು, ಒಬ್ಬರನ್ನು ಲಕ್ಷಿ$್ಮಪುರಕ್ಕೆ ಇಲಾಖೆ ನಿಯೋಜನೆಗೊಳಿಸಿದ್ದಕ್ಕೆ ಮತ್ತೊಬ್ಬ ಶಿಕ್ಷಕರಿಗೆ ಪ್ರಭಾರ ನೀಡದ್ದಕ್ಕೆ ಇದ್ದ ಇಬ್ಬರು ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳುಹಿಸಿಕೊಟ್ಟಿದ್ದರಿಂದಾಗಿ ಇಬ್ಬರು ಶಿಕ್ಷಕರ ಜಗಳದಿಂದಾಗಿ ಶಾಲೆಯನ್ನೇ ಮುಚ್ಚುವಂತಾಯಿತು.
ಅವಶ್ಯವಿದ್ದರೂ ನಿಯೋಜನೆಗೊಳಿಸಿಲ್ಲ
ಶ್ರೀನಿವಾಸಪುರ ತಾಲೂಕಿನಲ್ಲಿ ಹೆಚ್ಚು ಮಕ್ಕಳಿರುವ ತಾಡಿಗೋಳ್ ಹಿರಿಯ ಪ್ರಾಥಮಿಕ ಶಾಲೆ, ಪಟ್ಟಣದ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸರೋಜಿ ರಸ್ತೆಯ ಹಿರಿಯ ಪ್ರಾಥಮಿಕ ಶಾಲೆ, ಯಲ್ದೂರು, ಅಡ್ಡಗಲ್ ಸೇರಿ ಸುಮಾರು 20 ಶಾಲೆಗಳಲ್ಲಿ 100 ಕ್ಕೂ ಹೆಚ್ಚು ಮಕ್ಕಳ ಹಾಜರಾತಿ ಇದ್ದರೂ ಅಂತಹ ಶಾಲೆಗಳಿಗೆ ಶಿಕ್ಷಕರ ಅವಶ್ಯವಿದ್ದರೂ ಶಿಕ್ಷಕರನ್ನು ನಿಯೋಜನೆಗೊಳಿಸಿಲ್ಲ.
ಮಕ್ಕಳು ಇಲ್ಲದೆ ಮುಚ್ಚಲ್ಪಟ್ಟಿರುವ ಶಾಲೆಯ ಶಿಕ್ಷಕರ ಬಗ್ಗೆ ಇಲಾಖೆಗೆ ಮಾಹಿತಿ ನೀಡುವುದು, ಆಯಾ ತಾಲೂಕಿನ ಶಿಕ್ಷಣಾಧಿಕಾರಿಗಳ ಕರ್ತವ್ಯ. ಅವರು ನೀಡುವ ಪಟ್ಟಿಯಂತೆ ಆನ್ಲೈನ್ನಲ್ಲಿ ಕೌನ್ಸೆಲಿಂಗ್ನಲ್ಲಿ ಖಾಲಿ ಹುದ್ದೆ ತೋರಿಸುತ್ತಿದೆ. ಮುಚ್ಚಲ್ಪಟ್ಟಿರುವ ಶಾಲೆಗಳಿಗೆ ಶಿಕ್ಷಕರು ನಿಯುಕ್ತಿಗೊಂಡಿರುವುದರ ಬಗ್ಗೆ ಮಾಹಿತಿ ಇಲ್ಲ.
ಕೃಷ್ಣಮೂರ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ