ಜಿಲ್ಲೆ

ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ 3 ಹೆಸರು ಘೋಷಣೆ

ದಾವಣಗೆರೆ: ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಜಿಲ್ಲೆಯ 3 ಕ್ಷೇತ್ರಗಳಿಗೆ ಹೆಸರು ಘೋಷಣೆಯಾಗಿದ್ದು, ಉಳಿದ 4 ಕಡೆ ಯಾರು ಎನ್ನುವ ಕುತೂಹಲ ಮುಂದುವರಿದಿದೆ.

ಜಿಲ್ಲೆಯ 7 ಕ್ಷೇತ್ರಗಳ ಪೈಕಿ ದಾವಣಗೆರೆ ದಕ್ಷಿಣಕ್ಕೆ ಹಾಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ದಾವಣಗೆರೆ ಉತ್ತರಕ್ಕೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮಾಯಕೊಂಡ ಮೀಸಲು ಕ್ಷೇತ್ರಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಕೆ.ಎಸ್. ಬಸವಂತಪ್ಪ ಹೆಸರನ್ನು ವರಿಷ್ಠರು ಘೋಷಣೆ ಮಾಡಿದ್ದಾರೆ.

ಇವುಗಳ ಪೈಕಿ ದಾವಣಗೆರೆ ಉತ್ತರದಲ್ಲಿ ಮಲ್ಲಿಕಾರ್ಜುನ್ ಬಿಟ್ಟರೆ ಬೇರೆ ಯಾರೂ ಆಕಾಂಕ್ಷಿಗಳಿರಲಿಲ್ಲ. ಹಾಗಾಗಿ, ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ದಾವಣಗೆರೆ ದಕ್ಷಿಣ ಮತ್ತು ಮಾಯಕೊಂಡದಲ್ಲಿ ಬಂಡಾಯದ ಬಿಸಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ.

ಮುಸ್ಲಿಂ ಮತದಾರರ ಬಾಹುಳ್ಯವಿರುವ ದಾವಣಗೆರೆ ದಕ್ಷಿಣದಲ್ಲಿ ಅದೇ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎನ್ನುವ ಆಗ್ರಹ ಬಲವಾಗಿ ಕೇಳಿಬಂದಿತ್ತು. ಆ ಸಮುದಾಯದ ಮುಖಂಡರಾದ ಸಾದಿಕ್ ಪೈಲ್ವಾನ್, ಸೈಯದ್ ಖಾಲಿದ್ ಅಹಮದ್, ಇಬ್ರಾಹಿಂ ಖಲೀಲ್‌ವುಲ್ಲಾ, ಮಹಮದ್ ಇಕ್ಬಾಲ್ ಜತೆಗೆ ವಾಲ್ಮೀಕಿ ಸಮಾಜದ ಮುಖಂಡ ಬಿ. ವೀರಣ್ಣ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು.

ಎಲ್ಲರೂ ತಮಗಿರುವ ಸಂಪರ್ಕವನ್ನು ಬಳಸಿಕೊಂಡು ಪಕ್ಷದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರು. ಈ ನಡುವೆ ಡಾ.ಶಾಮನೂರು ಶಿವಶಂಕರಪ್ಪ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಉಳಿದ ಆಕಾಂಕ್ಷಿಗಳಲ್ಲಿ ಸಹಜವಾಗಿಯೇ ಅಸಮಾಧಾನ ಮೂಡಿದೆ. ಇದನ್ನು ಪಕ್ಷದ ಮಟ್ಟದಲ್ಲಿ ಹೇಗೆ ಬಗೆಹರಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಪರಿಶಿಷ್ಟ ಜಾತಿಗೆ ಮೀಸಲಾದ ಮಾಯಕೊಂಡ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಮಾಜಿ ಸಚಿವ ಕೆ. ಶಿವಮೂರ್ತಿ ನಾಯ್ಕ, ಕೆಪಿಸಿಸಿ ವಕ್ತಾರ ಡಿ. ಬಸವರಾಜ, ಜಿ.ಪಂ. ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ, ಬಿ.ಎಚ್. ವೀರಭದ್ರಪ್ಪ, ದುಗ್ಗಪ್ಪ, ಆನಂದಪ್ಪ, ಸವಿತಾಬಾಯಿ ಸೇರಿ 14ಕ್ಕೂ ಹೆಚ್ಚು ಮಂದಿ ಇದ್ದಾರೆ. ಕೆ.ಎಸ್. ಬಸವಂತಪ್ಪ ಹೆಸರು ಘೋಷಣೆ ಆಗಿರುವುದರಿಂದ ಉಳಿದ ಆಕಾಂಕ್ಷಿಗಳನ್ನು ಪಕ್ಷ ಹೇಗೆ ಸಮಾಧಾನ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಮುಂದುವರಿದ ಕುತೂಹಲ: ಜಿಲ್ಲೆಯ ಹರಿಹರ, ಹೊನ್ನಾಳಿ, ಚನ್ನಗಿರಿ ಮತ್ತು ಜಗಳೂರು ಕೇತ್ರಗಳ ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿಲ್ಲ. ಹರಿಹರದಲ್ಲಿ ಹಾಲಿ ಶಾಸಕ ಎಸ್. ರಾಮಪ್ಪ ಅವರ ಹೆಸರೇ ಮೊದಲ ಪಟ್ಟಿಯಲ್ಲಿ ಕಾಣಿಸಿಕೊಳ್ಳದಿರುವುದು ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅವರನ್ನು ಹೊರತುಪಡಿಸಿ ಅಲ್ಲಿಯೂ ಅನೇಕ ಆಕಾಂಕ್ಷಿಗಳಿದ್ದಾರೆ. ಯಾರಿಗೆ ಅದೃಷ್ಟ ಒಲಿಯುತ್ತದೆ ಎಂಬುದು ಸದ್ಯದ ಕುತೂಹಲ. ಹೊನ್ನಾಳಿಯಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ನಡುವೆ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ಇದೆ. ಚನ್ನಗಿರಿಯಲ್ಲಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅವರಲ್ಲದೇ ಅನೇಕರು ಆಕಾಂಕ್ಷಿಗಳಿದ್ದಾರೆ. ಜಗಳೂರಿನಲ್ಲಿ ಮಾಜಿ ಶಾಸಕ ಎಚ್.ಪಿ. ರಾಜೇಶ್ ಮತ್ತು ಇನ್ನೂ ಅನೇಕರು ಪ್ರಯತ್ನ ನಡೆಸಿದ್ದಾರೆ. ಎಲ್ಲವನ್ನೂ ಅಳೆದು, ತೂಗಿ ಪಕ್ಷ ನಿರ್ಧಾರ ತೆಗೆದುಕೊಳ್ಳಲಿದೆ.

ಮೊದಲ ಪಟ್ಟಿಯಲ್ಲಿ 3 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದು ಯಾರಿಂದಲೂ ಅಸಮಾಧಾನ ವ್ಯಕ್ತವಾಗಿಲ್ಲ. ಒಂದು ವೇಳೆ ಆ ರೀತಿಯಿದ್ದರೆ ಜಿಲ್ಲೆಯ ನಾಯಕರೊಂದಿಗೆ ಚರ್ಚಿಸಿ ಸರಿಪಡಿಸಲಾಗುವುದು. ಎಚ್.ಬಿ. ಮಂಜಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.