ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಡಿನ ನಡುವೆ ಹಾದು ಹೋಗಿರುವ 52 ಕಿಮೀ ವಿದ್ಯುತ್ ಲೈಗಳನ್ನು ರಸ್ತೆಯ ಪಕ್ಕ ಸ್ಥಳಾಂತರಿಸಲು ಕ್ರಮ ವಹಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರ ನೀಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ 592 ಕಿಮೀ ಉಪ ವಿದ್ಯುತ್ (ಎಲ್ಟಿ)ಲೈನ್ ಗಳಗಳ ಜಾಲವಿದೆ. ಕಾಡಿನ ನಡುವೆ ವಿದ್ಯುತ್ ಲೈನ್ ಕೊಂಡೊಯ್ಯುವುದು ಅನಿವಾರ್ಯ. ಮಳೆಗಾಲ ಬಂದಾಗ ಕಂಬ, ಲೈನ್ ಮೇಲೆ ಮರ ಬಿದ್ದು ವಿದ್ಯುತ್ ಕಡಿತವಾಗುತ್ತದೆ. ಹಾಗೆಂದು ಎಲ್ಲ ವಿದ್ಯುತ್ ಲೈನ್ ಸ್ಥಳಾಂತರಕ್ಕೆ ಸಾಧ್ಯವಿಲ್ಲ. ಅಗತ್ಯವೂ ಇಲ್ಲ. ಆದರೆ,ಕಾಡಿನ ನಡುವೆ ಹಾದು ಹೋಗಿರುವ 52 ಕಿಮೀ ವಿದ್ಯುತ್ ಲೈನ್ ಗೆ ಪದೇ ಪದೇ ತೊಂದರೆಯಾಗುತ್ತಿದೆ.
ಅರಣ್ಯದ ನಡುವೆ ತೀವ್ರ ಸಮಸ್ಯೆ ಉಂಟಾಗುತ್ತಿದ್ದ 7 ಕಿಮೀ ತಂತಿಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಇನ್ನೂ 9 ಕಿಮೀ ಲೈನ್‌ಗಳ ಸ್ಥಳಾಂತರ ಅಗತ್ಯವಿದೆ. ಆದರೆ, ಕೆಲವೆಡೆ ಜಾಗದ ಸಮಸ್ಯೆ ಇದೆ. ಶಾಸಕರು ಅದನ್ನು ಬಗೆಹರಿಸಲು ಯತ್ನಿಸಿದರೆ ನಮ್ಮ ಅಽಕಾರಿಗಳು ಎಲ್ಲ ಲೈನ್‌ಗಳನ್ನು ತುರ್ತಾಗಿ ಸ್ಥಳಾಂತರ ಮಾಡಲು ಕ್ರಮ ವಹಿಸುವರು ಎಂದರು.
ಜಿಲ್ಲೆಯಲ್ಲಿ 174 ಕಿಮೀ ಹೈಟೆನ್ಶನ್ ವಿದ್ಯುತ್ ಲೈನ್ ಇದ್ದು, ಅಲ್ಲಿ ವರ್ಷದಲ್ಲಿ ಮೂರ್ನಾಲ್ಕು ಬಾರಿ ಮಾತ್ರ ಸಮಸ್ಯೆ ಆಗಬಹುದು. ಆದರೆ, ಎಲ್ಟಿ ಲೈನ್ ಇದ್ದಲ್ಲಿ ತೀವ್ರ ಸಮಸ್ಯೆ ಆಗುತ್ತದೆ. ಉತ್ತರ ಕನ್ನಡ ಮಾತ್ರವಲ್ಲದೇ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 1200 ಕೋಟಿ ನಷ್ಟವಾಗುತ್ತದೆ ಎಂದು ಸಭೆಗೆ ಅವರು ವಿವರಿಸಿದರು.
ಭೀಮಣ್ಣ ನಾಯ್ಕ ಕೇಳಿದ್ದೇನು..?
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ನನ್ನ ಕ್ಷೇತ್ರ ಸಂಪೂರ್ಣ ಮಲೆನಾಡು, ದಟ್ಟ ಅರಣ್ಯವನ್ನು ಹೊಂದಿದೆ. ಅಲ್ಲಿ ಒಂದು ಮಳೆ ಶುರುವಾಯಿತು ಎಂದರೆ ಹಳ್ಳಿ ಭಾಗದ ವಿದ್ಯುತ್ ಲೈನ್‌ಗಳ ಮೇಲೆ ಮರ ಬಿದ್ದು, ಒಂದುವರೆ ಎರಡು ವಾರ ವಿದ್ಯುತ್ ಸಂಪರ್ಕವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‌ಗಳನ್ನು ರಸ್ತೆ ಬದಿಯಲ್ಲಿ ಸ್ಥಳಾಂತರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.