ವೆಂಕಟೇಶ ನಾಯ್ಕ 
ಜಿಲ್ಲೆ

ಜೀವಬೆದರಿಕೆ ಹಾಕಿದ ತಾಪಂ ಮಾಜಿ ಅಧ್ಯಕ್ಷನ ಬಂಧನ

ಕೊಟ್ಟೂರು: ಹಲ್ಲೆ ಮತ್ತು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ತಾಪಂ ಮಾಜಿ ಅಧ್ಯಕ್ಷ ಹಾಗೂ ಸೌತೆಕಾಯಿ ಸೀಡ್ಸ್ ಮಾಲೀಕ ವೆಂಕಟೇಶ ನಾಯ್ಕನ್ನು ಪಟ್ಟಣದ ಟೌನ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಬುಧವಾರ ರಾತ್ರಿ ಜೈಲಿಗೆ ಕಳುಹಿಸಿದ್ದಾರೆ.

ಟ್ರ್ಯಾಕ್ಟರ್ ಟ್ರಾಲಿ ಬಾಡಿಗೆ ವಿಷಯವಾಗಿ ಜಗಳ

ವೆಂಕಟೇಶ ನಾಯ್ಕ ಟ್ರಾೃಕ್ಟರ್ ಟ್ರಾಲಿಯನ್ನು ರಾಂಪುರದ ಎಚ್. ಮೂಗಣ್ಣ ಅವರಿಗೆ ಪ್ರತಿ ತಿಂಗಳು 6 ಸಾವಿರ ರೂ. ಬಾಡಿಗೆ ನೀಡಿದ್ದಾರೆ. ಕಳೆದ ಎರಡು ತಿಂಗಳಿಂದ ಬಾಡಿಗೆ ನೀಡದ ಸಂಬಂಧ ಇಬ್ಬರಲ್ಲಿ ಜಗಳವಾಗಿದೆ. ಎಚ್. ಮೂಗಣ್ಣನ್ನನ್ನು ವೆಂಕಟೇಶ ನಾಯ್ಕ ರಾಂಪುರದಿಂದ ಕಾರಿನಲ್ಲಿ ಕರೆದುಕೊಂಡು ಹೋಗಿ ಗ್ರಾಮದ ಹೊರವಲಯದಲ್ಲಿ ಹಲ್ಲೆ ಮಾಡಿದ್ದಾನೆ. ಮೂಗಣ್ಣ ಪೊಲೀಸ್ ಇಲಾಖೆ 112ಗೆ ಕರೆ ಮಾಡಿ ಹಲ್ಲೆ ಮಾಡಿರುವುದನ್ನು ತಿಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಆಗ ವೆಂಕಟೇಶ ನಾಯ್ಕ ಆತನ ಮೊಬೈಲ್ ಕಸಿದುಕೊಂಡು ಬಿಸಾಕಿ ಪುನ: ಹಲ್ಲೆ ಮಾಡಿದ್ದಾನೆ. ನಿನ್ನನ್ನು ಕಾರಿ ಹಾಯಿಸಿ ಸಾಯಿಸಿಬಿಡುತ್ತೇನೆ ಅಂತ ಬೆದರಿಕೆಹಾಕಿ, ಕೈಯಿಂದ ದೂಡಿ ರಸ್ತೆಗೆ ಕೆಡವಿಕೊಂಡು ಕುತ್ತಿಗೆ ಮೇಲೆ ಕಾಲು ಇಟ್ಟು ಸಾಯಿಸಲು ವೆಂಕಟೇಶ ನಾಯ್ಕ ಪ್ರಯತ್ನಿಸಿದ್ದಾನೆ ಎಂದು ಎಚ್. ಮೂಗಣ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ್ವಯ ತಾಪಂ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.