ಜಿಲ್ಲೆ

ಟಿಕೆಟ್ ಕೌಂಟರ್ ಸಿಬ್ಬಂದಿ ಮೇಲೆ ಹಲ್ಲೆ

ಕೆ.ಆರ್.ಸಾಗರ: ವಿಶ್ವ ವಿಖ್ಯಾತ ಕೃಷ್ಣರಾಜಸಾಗರದ ಬೃಂದಾವನದಲ್ಲಿ ಶನಿವಾರ ಸಂಜೆ ತಾಂತ್ರಿಕ ಕಾರಣದಿಂದ ಸಂಗೀತ ಕಾರಂಜಿ ಪ್ರಾರಂಭ ವಾಗುವುದು ತಡವಾದ ಹಿನ್ನೆಲೆ ಪ್ರವೇಶ ದ್ವಾರದಲ್ಲಿ ಟಿಕೆಟ್ ಕೌಂಟರ್‌ನ ಸಿಬ್ಬಂದಿ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಸಾಲು ರಜೆ ಹಿನ್ನೆಲೆ ಬೃಂದಾವನಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು, ಶನಿವಾರ ಸಂಜೆ ಎಂದಿನಂತೆ 6.45ಕ್ಕೆ ನೃತ್ಯ ಕಾರಂಜಿ ಪ್ರಾರಂಭವಾಗಬೇಕಿತ್ತು. ಸಂಗೀತ ಕಾರಂಜಿಯು ತಾಂತ್ರಿಕ ಕಾರಣದಿಂದ ಸುಮಾರು 1 ಘಂಟೆಯಾದರೂ ಪ್ರಾರಂಭವಾಗದ ಕಾರಣ ನೃತ್ಯ ಕಾರಂಜಿ ಬಳಿ ಪ್ರವಾಸಿಗರು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಜತೆ ಜಗಳ ತೆಗೆದು ನಂತರ ಪ್ರವೇಶ ಟೆಕೆಟ್ ಕೌಂಟರ್ ಬಳಿ ಬಂದು ಟಿಕೆಟ್ ನೀಡಲು ನಿಯೋಜನೆಗೊಂಡಿರುವ ಕೆ.ಸಿ.ಐ.ಸಿ ಸಿಬ್ಬಂದಿಗಳ ಜತೆ ಜಗಳವಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಮಾಡಿದ್ದಾರೆ.

ಪ್ರಕರಣ ಸಂಬಂಧ ಕಾವೇರಿ ನೀರಾವರಿ ನಿಗಮ ಮತ್ತು ಕೆಎಸ್‌ಐಎಸ್‌ಎಫ್ ಹಾಗೂ ಟೆಕೆಟ್ ಕೌಂಟರ್ ನಿರ್ವಹಣೆ ಮಾಡುವ ಕೆಸಿಐಸಿ ಕಂಪನಿ ಜತೆ ಸೋಮವಾರ ಸಭೆ ನಡೆಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮ ಅಧೀಕ್ಷಕ ಅಭಿಯಂತರ ರಘುರಾಮ್ ಹೇಳಿದರು.