ಜಿಲ್ಲೆ

ಖಾಸಗಿ ಬಸ್ ಪ್ರಯಾಣಿಕನ ಮೇಲೆ ಹಲ್ಲೆ

ಭಟ್ಕಳ: ಖಾಸಗಿ ಬಸ್‌ನಲ್ಲಿ ಹೈದರಾಬಾದ್‌ನಿಂದ ಭಟ್ಕಳಕ್ಕೆ ಬರುತ್ತಿದ್ದ ವ್ಯಕ್ತಿಯ ಮೇಲೆ ಕೊಪ್ಪಳ ಜಿಲ್ಲೆಯ ಗಂಗಾವತಿ ಟೋಲ್‌ಗೇಟ್ ಬಳಿ ಐದಾರು ಜನರ ಗುಂಪೊಂದು ಹಲ್ಲೆ ನಡೆಸಿರುವ ಕುರಿತು ದೂರು ದಾಖಲಾಗಿದೆ.

ಪಟ್ಟಣದ ಹನೀಫಾಬಾದ್ 1ನೇ ಕ್ರಾಸ್ ನಿವಾಸಿ ಮುಜೀದ್ ಅಬ್ದುಲ್ ಹಮೀದ್ ಎನ್ನುವವರು ಜುಲೈ 1 ರಂದು ಹೈದರಾಬಾದ್‌ನಿಂದ ಭಟ್ಕಳಕ್ಕೆ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ಬಸ್ ಚಾಲಕನ ಪಕ್ಕದ ಸೀಟ್‌ನಲ್ಲಿ ಕುಳಿತುಕೊಂಡಿದ್ದರು. ಅಲ್ಲಿ ಕೂರದಂತೆ ಚಾಲಕ ಮತ್ತು ನಿರ್ವಾಹಕ ತಿಳಿಹೇಳಿದ್ದಾರೆ. ಬಸ್ ಗಂಗಾವತಿ ಟೋಲ್‌ಗೇಟ್ ತಲುಪುತ್ತಿದ್ದಂತೆ ಈ ಪ್ರಯಾಣಿಕ ಏಕಾಏಕಿ ಬಸ್‌ನಿಂದ ಇಳಿದು ಓಡಿ ಸಮೀಪದ ಮನೆಯೊಂದರ ಬಳಿ ನಿಂತಿದ್ದಾನೆ.

ಮನೆ ಬಳಿ ನಿಂತಿರುವ ವೇಳೆ ಆಗಮಿಸಿದ ಐದಾರು ಜನರ ಗುಂಪೊಂದು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಕೋರರಿಂದ ತಪ್ಪಿಸಿಕೊಂಡ ಪ್ರಯಾಣಿಕ ಬೇರೊಂದು ಬಸ್ ಹತ್ತಿ ಭಟ್ಕಳ ತಲುಪಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಪ್ರಯಾಣಿಕ ಏಕಾಏಕಿ ಬಸ್‌ನಿಂದ ಇಳಿದು ಓಡಿದ್ದೇಕೆ?, ಬಸ್‌ನಲ್ಲಿ ಏನು ನಡೆದಿದೆ?, ಹಲ್ಲೆ ನಡೆಸಿದವರ‌್ಯಾರು? ಎಂಬಿತ್ಯಾದಿ ಪ್ರಶ್ನೆಗಳು ತಲೆದೋರಿವೆ.

ಕುಟುಂಬಸ್ಥರ ಪ್ರತಿಭಟನೆ

ಘಟನೆಯಿಂದ ಆಕ್ರೋಶಗೊಂಡ ಹಲ್ಲೆಗೊಳಗಾದ ವ್ಯಕ್ತಿಯ ಸಂಬಂಧಿಕರು ಜುಲೈ 2ರಂದು ಸಂಜೆ ಮಂಗಳೂರಿಂದ ಹೈದರಾಬಾದ್‌ಗೆ ತೆರಳುವ ಅದೇ ಖಾಸಗಿ ಬಸ್ ಅಡ್ಡಗಟ್ಟಿದ್ದಾರೆ. ನಗರದ ಟಿ.ಎಫ್.ಸಿ ಹೋಟೆಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆಗೆ ಯತ್ನಿಸಿದ್ದರು. ಆದರೆ, ಪೊಲೀಸರು ಬಸ್ ತಡೆಯಲು ಅವಕಾಶ ನೀಡದ್ದರಿಂದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.