ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಹೋಟೆಲ್ ಕಾರ್ಮಿಕನನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಹಲ್ಲೆಗೈದು ತೋರಿಸಿ ದರೋಡೆಗೆ ಯತ್ನಿಸಿರುವ ಘಟನೆ ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪುಲಿಕೇಶಿನಗರದ ಮನೋಜ್(೨೫) ಹಲ್ಲೆಗೊಳಗಾದ ಕಾರ್ಮಿಕ.
ಅಸ್ಸಾಂ ಮೂಲದ ಮನೋಜ್ ಕೆಲ ತಿಂಗಳಿಂದ ಪುಲಿಕೇಶಿನಗರದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ರಾತ್ರಿ ಕೆಲಸ ಮುಗಿಸಿ ಭಾನುವಾರ ಮುಂಜಾನೆ ೧.೩೦ರ ಸುಮಾರಿಗೆ ಪುಲಿಕೇಶಿನಗರದ ಎಂ.ಎಂ.ರಸ್ತೆಯಲ್ಲಿ ನಡೆದುಕೊಂಡು ರೂಂ ಕಡೆಗೆ ಬರುತ್ತಿದ್ದ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೋಜ್‌ನನ್ನು ತಡೆದು ಚಾಕು ತೋರಿಸಿ ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ಮನೋಜ್ ಪ್ರತಿರೋಧವೊಡ್ಡಿ ಚೀರಾಡಿದಾಗ ದುಷ್ಕರ್ಮಿಗಳು ಹಲ್ಲೆಗೈದು ಪರಾರಿಯಾಗಿದ್ದಾರೆ.
ಈ ಸಂಬಂಧ ಮನೋಜ್ ನೀಡಿದ ದೂರಿನ ಮೇರೆಗೆ ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದು, ದುಷ್ಕರ್ಮಿಗಳ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.