ಜಿಲ್ಲೆ

ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ

ರುದ್ರಪ್ಪ ವಾಲಿ

ಗಂಗಾವತಿ: ಲೂಕಿನ ದಾಸನಾಳ ಬ್ರಿಡ್ಜ್ ಬಳಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಗ್ರಾಮೀಣ ಪೊಲೀಸರು ಬುಧವಾರ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಗರದ ಕಿಲ್ಲಾ ಏರಿಯಾದ ಅರಭಾಜ್‌ಖಾನ್ ಸರ್ದಾರ್‌ಖಾನ್, ಶಿವ ಬಡಾವಣೆ ಪಂಪನಗೌಡ ಶರಣೇಗೌಡ,ಮಳ್ಳಿಕೇರಿ ಓಣಿಯ ವೆಂಕಟೇಶ ಶರಣಪ್ಪ ಬಂಧಿತರು. ದಾಸನಾಳ್‌ದ ರಾಜ್ಯ ಹೆದ್ದಾರಿಯಲ್ಲಿ ಒಂದೇ ಬೈಕ್‌ನಲ್ಲಿ ಮೂವರಿದ್ದು, ವ್ಹೀಲಿಂಗ್‌ನೊಂದಿಗೆ ಬೈಕ್‌ನ್ನು ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದರು. ಬೈಕ್ ಮುಗುಚಿದ್ದರಿಂದ ರಸ್ತೆಯಲ್ಲಿ ಮೂವರು ಬಿದ್ದು, ಗಾಯಗೊಂಡಿದ್ದರು.

ತಾಲೂಕಿನ ಹೇಮಗುಡ್ಡದಿಂದ ಪೊಲೀಸ್ ಠಾಣೆಗೆ ಬರುತ್ತಿದ್ದ ಗ್ರಾಮೀಣ ಪಿಎಸೈ ಪುಂಡಪ್ಪ ಮತ್ತು ಇತರೆ ಪೊಲೀಸರು ಗಾಯಾಳುಗಳನ್ನು ಗಮನಿಸಿದ್ದು, ನೆರವಿಗೆ ಧಾವಿಸಿದ್ದಾರೆ. ಏಕಾಏಕಿ ಪೊಲೀಸರ ಮೇಲೆ ಆರೋಪಿಗಳು ದಾಳಿ ನಡೆಸಿದ್ದರಲ್ಲದೇ, ಗದ್ದಲ ನಡೆಸಿದ್ದಾರೆ. ಸ್ಥಳದಲ್ಲಿದ್ದವರು ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರು ಮದ್ಯವ್ಯಸನಿಗಳಾಗಿರುವ ಶಂಕೆ ವ್ಯಕ್ತವಾಗಿದ್ದು, ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಹೆದ್ದಾರಿಯಲ್ಲಿ ವ್ಹೀಲಿಂಗ್ ಪ್ರಕರಣ ಹೆಚ್ಚುತ್ತಿದ್ದು, ಅಪಘಾತಗಳಾಗುತ್ತಿವೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.