ಕೆ.ಆರ್.ಪುರ: ಬೈಕ್ ಹಿಂದಿಕ್ಕಿದರು ಎಂಬ ಕಾರಣಕ್ಕೆ ಕೆ.ಆರ್. ಪುರದ ಅಯ್ಯಪ್ಪನಗರದಲ್ಲಿ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ ಇಬ್ಬರು ಬೈಕ್ ಸವಾರರು ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಆರ್.ಟಿ. ನಗರದ ನಿವಾಸಿ ತಿಲಕ್ರಾಜ್ ಹಲ್ಲೆಗೊಳಗಾದವರು. ವೈಟ್ಫೀಲ್ಡ್ನಲ್ಲಿರುವ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ತಿಲಕ್, ಸೋಮವಾರ (ಮಾ.2) ಸಂಜೆ 4.15 ಗಂಟೆಯಲ್ಲಿ ಕಾರಿನಲ್ಲಿ ಹೂಡಿಯಿಂದ ಅಯ್ಯಪ್ಪನಗರದ ಮುಖ್ಯರಸ್ತೆ ಮಾರ್ಗವಾಗಿ ಆರ್.ಟಿ. ನಗರಕ್ಕೆ ತೆರಳುತ್ತಿದ್ದಾಗ ಅಯ್ಯಪ್ಪನಗರದ ಕೃಷ್ಣ ಕಮಿಟಿ ಹಾಲ್ ಬಳಿ ಬೈಕ್ ಸವಾರರು ಕಾರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಬೈಕ್ನಲ್ಲಿದ್ದ ಓರ್ವ ಕಬ್ಬಿಣದ ರಾಡ್ನಿಂದ ಕಾರಿನ ಗಾಜು ಒಡೆದು ಹಾಕಿದ್ದಾನೆ. ಅದನ್ನು ಪ್ರಶ್ನಿಸಲು ಮುಂದಾದಾಗ ಇಬ್ಬರೂ ಸೇರಿ, ‘ನಮ್ಮನ್ನೇ ಹಿಂದಿಕ್ಕಿ ಬರುತ್ತಿಯಾ’ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ತಿಲಕ್ರಾಜ್ ದೂರು ಕೊಟ್ಟಿದ್ದಾರೆ.
ಕಾರಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಮುಖಚಹರೆ ಸೆರೆಯಾಗಿದೆ. ಅದನ್ನು ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.