ಮೈಸೂರು: ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಬಾರದು ಎಂದು ಬುದ್ಧಿವಾದ ಹೇಳಿದ ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲೆ ಯುವಕ ಹಲ್ಲೆ ಮಾಡಿದ್ದಾನೆ.
ಕುಂಬಾರಕೊಪ್ಪಲು ನಿವಾಸಿ ಧನುಷ್ ಹಲ್ಲೆ ನಡೆಸಿದವ. ಈತ ಬುಧವಾರ ಸಂಜೆ ನಗರಪಾಲಿಕೆ ವಲಯ-5 ಕಚೇರಿ ಬಾಗಿಲ ಬಳಿ ನಿಂತು ಸಿಗರೇಟ್ ಸೇದುತ್ತಿದ್ದ ಎನ್ನಲಾಗಿದೆ. ಇದನ್ನು ನೋಡಿ ಬುದ್ಧಿವಾದ ಹೇಳಿದ ಕಂದಾಯಾಧಿಕಾರಿ ನಂದಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಕೂಡ ಹಾಕಿದ್ದು, ಈ ವಿಡಿಯೋ ವೈರಲ್ ಆಗಿದೆ.
ಸಿಟ್ಟಿಗೆದ್ದ ಧನುಷ್ ಕಚೇರಿ ಒಳಗೆ ನುಗ್ಗಿ ಸಹೋದ್ಯೋಗಿಗಳ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ನನ್ನ ಕೊರಳಪಟ್ಟಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಕಂದಾಯಾಧಿಕಾರಿ ನಂದಕುಮಾರ್ ದೂರಿನಲ್ಲಿ ತಿಳಿಸಿದ್ದು, ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ: ಕರ್ತವ್ಯನಿರತ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಘಟನೆ ಖಂಡಿಸಿ ನಗರಪಾಲಿಕೆ ಸಿಬ್ಬಂದಿ ಗುರುವಾರ ಕೆಲ ಹೊತ್ತು ಕೆಲಸ ಸ್ಥಗಿತಗೊಳಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿರುವ ಆರೋಪಿಯನ್ನು ಬಂಧಿಸಬೇಕು ಹಾಗೂ ಆತನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.