ಮಡಿಕೇರಿ: ಮಡಿಕೇರಿ ನಗರಸಭಾ ಸದಸ್ಯರ ಮೇಲೆ ಯುವಕರ ಗುಂಪೊಂದು ಮಾಡಿರುವ ಹಲ್ಲೆ ಪ್ರಕರಣವನ್ನು ಖಂಡಿಸಿರುವ ಜಿಲ್ಲಾ ಬಿಜೆಪಿ, ಆರೋಪಿಗಳನ್ನು ಶೀಘ್ರವಾಗಿ ಬಂಧಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ನಗರಸಭಾ ಸದಸ್ಯ ಕಾಳಚಂಡ ಅಪ್ಪಣ್ಣ ಅವರ ಮೇಲೆ ನಡೆದ ಘಟನೆಯನ್ನು ಕೂಲಕುಂಶವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ತಕ್ಷಣವೇ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ. ಇಂತಹ ಘಟನೆಗಳಿಂದ ಭಯದ ವಾತಾವಣ ಸೃಷ್ಠಿಯಾಗಿದೆ ಎಂದು ಹೇಳಿದರು.
ಕೊಡಗು ಗುಡ್ಡಗಾಡು ಪ್ರದೇಶವಾದ್ದರಿಂದ ಮನೆಗಳಿಗೆ ಹಾನಿಯಾಗುವುದು ಪ್ರಕೃತಿ ಸಹಜ. ಇದಕ್ಕೆ ಜನಪ್ರತಿನಿಧಿಗಳು ಕಾರಣರಾಗುದಿಲ್ಲ. ಇದೊಂದು ಹೇಯ ಕೃತ್ಯವಾಗಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ರಕ್ಷಣೆ ನೀಡುವಂತಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ವಕ್ತಾರ ಮಹೇಶ್ ಜೈನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ, ನಗರಾಧ್ಯಕ್ಷ ಮನುಮಂಜುನಾಥ್ ಉಪಸ್ಥಿತರಿದ್ದರು.