ವಿಜಯವಾಣಿ ಸುದ್ದಿಜಾಲ ಆನೇಕಲ್
ಹೊಸೂರು ರಸ್ತೆಯ ಕಾವೇರಿ ಕಾಲೇಜು ಬಳಿ ಖಾಸಗಿ ಶಾಲೆಗಳ ಶಿಕ್ಷಕರ ಮೇಲ್ವಿಚಾರಕ ಮುರುಳಿ ಎಂಬುವರನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪದ ಮೇಲೆ ಇಬ್ಬರನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಸಿದ್ಧಾರ್ಥ (21) ದರ್ಶನ (20) ಬಂಧಿತರು. ಇನ್ನು ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಮುರುಳಿಯನ್ನು ಅಪಹರಿಸಿ ನೀಲಗಿರಿ ತೋಪಿಗೆ ಎಳೆದುಕೊಂಡು ಹೋಗಿ ಬೆನ್ನಿನಿಂದ ಬೆನ್ನಿಗೆ ಚುಚ್ಚಿ ಕಾಲು ಮತ್ತಿತರ ಭಾಗಗಳಿಗೆ ದೊಣ್ಣೆಯಿಂದ ಹೊಡೆದು ಸುಮಾರು 3 ಗಂಟೆಗಳ ಕಾಲ ವಿಕೃತಿ ಮೆರೆದಿದ್ದರು. ಪ್ರಕರಣದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಗಾಂಜಾ ಮತ್ತಿನಲ್ಲಿ ಪುಡಿರೌಡಿಗಳ ಕಿರಿಕಿರಿ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿ ತೀವ್ರ ಹುಡುಕಾಟ ನಡೆಸಿದ್ದರು.
ಏನಿದು ಪ್ರಕರಣ? ಕೆಲಸದ ನಿಮಿತ್ತ ಹೊರಟಿದ್ದ ಮುರುಳಿ ದಾರಿ ಮಧ್ಯೆ ಮೂತ್ರ ವಿಜರ್ಸನೆಗೆ ಬೈಕ್‌ನಿಂದ ಇಳಿದಾಗ ಏಕಾಏಕಿ ಮುಗಿಬಿದ್ದ ದುಷ್ಕರ್ಮಿಗಳು ನೀಲಗಿರಿ ತೋಪಿಗೆ ಎಳೆದೊಯ್ದು ಹಲ್ಲೆ ನಡೆಸಿದ್ದರು. ಖಾತೆಯಲ್ಲಿದ್ದ 100 ರೂಪಾಯಿಯನ್ನು ಪೋನ್ ಪೇ ಮೂಲಕ ವರ್ಗಾವಣೆ ಮಾಡಿಕೊಂಡು ಬೈಕ್ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಮುರುಳಿ ಅಲ್ಲಿಂದ ಪ್ರಯಾಸದಿಂದ ಮುತ್ತುದಿಣ್ಣೆ ಕ್ರಾಸ್‌ಗೆ ನಡೆದುಕೊಂಡು ಬಂದಿದ್ದರು. ಅಲ್ಲಿ ಸ್ನೇಹಿತ ಕೆಂಪೇಗೌಡ ಅವರಿಗೆ ನಡೆದ ವಿಷಯ ತಿಳಿದಿದ್ದರು. ತಕ್ಷಣ ಸ್ನೇಹಿತ ಆಸ್ಪತ್ರೆಗೆ ದಾಖಲಿಸಿದ್ದರು.
ಗಾಂಜಾ ಮತ್ತಿನಲ್ಲಿ ಪುಂಡಾಟ: ಪ್ರಕರಣದ ವೇಳೆ ಗಾಂಜಾ ಮತ್ತಿನಲ್ಲಿದ್ದ ಪುಂಡರು ಪುಂಡಾಟ ನಡೆಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವ ಉದ್ದೇಶಕ್ಕೆ ಮುರುಳಿ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದರ ಬಗ್ಗೆ ತನಿಖೆ ಮುಂದುವರೆಸಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.