ಜಿಲ್ಲೆ

ಕಾಡುಕೋಣ ತಿವಿದು ಅಸ್ಸಾಂ ಮಹಿಳೆ ಸಾವು

ಮೂಡಿಗೆರೆ: ಹಳೆಕೋಟೆ ಗ್ರಾಮದ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಮಾಡುತ್ತಿದ್ದ ಮಹಿಳೆ ಮೇಲೆ ಬುಧವಾರ ಕಾಡುಕೋಣ ದಾಳಿ ನಡೆಸಿದ್ದರಿಂದ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಬಸೂರಿ ಬೀಬಿ (42) ಮೃತ ಮಹಿಳೆ. ಹಳೆಕೋಟೆಯ ಕಾಫಿ ತೋಟದಲ್ಲಿ ಎಂದಿನಂತೆ ಮಹಿಳೆ ಎಂದಿನಂತೆ ಕಾಫಿ ಕೊಯ್ಲು ನಡೆಸುತ್ತಿದ್ದಾಗ ಬೆಳಗ್ಗೆ 11ಕ್ಕೆ ಕಾಡುಕೋಣವೊಂದು ದಿಢೀರ್ ಮಹಿಳೆ ಮೇಲೆ ದಾಳಿ ನಡೆಸಿ ಹೊಟ್ಟೆ ಮತ್ತು ಎದೆ ಭಾಗಕ್ಕೆ ಕೊಂಬಿನಿಂದ ತಿಳಿದು ಎತ್ತಿ ದೂರಕ್ಕೆ ಎಸೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಮಹಿಳೆ ಮೇಲೆ ಕಾಡುಕೋಣ ದಾಳಿ ನಡೆಸುವಾಗ ಆಕೆ ಜತೆಯಲ್ಲಿದ್ದ ಇತರೆ ಕಾರ್ಮಿಕರು ದಿಕ್ಕಾಪಾಲಾಗಿ ಓಡಿ ತಪ್ಪಿಸಿಕೊಂಡಿದ್ದಾರೆ. ಮೃತಳ ಪತಿ ಸಲಾಂ ಆಲಿ ನೀಡಿದ ದೂರಿನಂತೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.