ಶಿವಮೊಗ್ಗದ ಮಂಜುನಾಥ ರಾವ್ ಪತ್ನಿ ಆರ್.ಪಲ್ಲವಿ ಅವರಿಗೆ ಅಸ್ಸಾಂ ಸಚಿವ ಬಿಮಲ್ ಬೋರಾಹ್ ಅವರು 5 ಲಕ್ಷ ರೂ. ಮೌಲ್ಯದ ಪರಿಹಾರದ ಚೆಕ್ ವಿತರಿಸಿದರು. ಅಸ್ಸಾಂ ಸರ್ಕಾರದ ಕಾರ್ಯದರ್ಶಿ ಎನ್.ಕೈಲಾಸ್ ಕಾರ್ತಿಕ್ ಇತರರಿದ್ದರು. 
ಜಿಲ್ಲೆ

ಮಂಜುನಾಥ ರಾವ್ ಕುಟುಂಬಕ್ಕೆ ಅಸ್ಸಾಂ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗ ವಿಜಯನಗರದ ಕೆ.ಎಂ.ಮಂಜುನಾಥ ರಾವ್ ಮನೆಗೆ ಅಸ್ಸಾಂ ಕೈಗಾರಿಕೆ ಸಚಿವ ಬಿಮಲ್ ಬೋರಾಹ್ ಭಾನುವಾರ ಬೆಳಗ್ಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ನಗರದ ನೇತಾಜಿ ವೃತ್ತದ ಬಳಿ ಇರುವ ನಿವಾಸಕ್ಕೆ ತೆರಳಿದ ಸಚಿವರು, ಮಂಜುನಾಥ್ ರಾವ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಕೃತ್ಯದ ದಿನ ನಡೆದ ಘೋರ ದುರಂತವನ್ನು ಮಂಜುನಾಥ ರಾವ್ ಅವರ ಪತ್ನಿ ಆರ್.ಪಲ್ಲವಿ ಸಚಿವರಿಗೆ ವಿವರಿಸಿದರು.

ರಜಾ ದಿನಗಳಂದು ಪಹಲ್ಗಾಮ್‌ಗೆ ಹೋಗಿದ್ದಕ್ಕಾಗಿ ಉಗ್ರರ ದಾಳಿಗೆ ಪತಿಯನ್ನು ಕಳೆದುಕೊಳ್ಳಬೇಕಾಯಿತು. 15 ಸೆಕೆಂಡ್‌ನಲ್ಲಿ ಕಣ್ಣೇದುರೇ ಹತ್ಯೆ ನಡೆದುಹೋಯಿತು. ಉಗ್ರನೊಬ್ಬ ಪತಿ ಜತೆಯಿದ್ದ ಪುತ್ರ ಅಭಿಜೈನನ್ನು ಕರೆದುಕೊ ಎಂಬ ಸೂಚನೆ ಕೊಡುತ್ತಿದ್ದ. ಅದಾದ ಕೆಲವೇ ನಿಮಿಷಗಳಲ್ಲಿ 26 ಜನರ ರಕ್ತ ಚಿಮ್ಮಿಸಿದರು. ಬಹಳ ಹತ್ತಿರದಿಂದ ಭಾರತೀಯರ ಹಣೆಗೆ ಗನ್ ಇಟ್ಟು ಹತ್ಯೆ ಮಾಡಿ ಪೈಶಾಚಿಕ ಕೃತ್ಯವೆಸಗಿದರು ಎಂಬುದನ್ನು ಪಲ್ಲವಿ ತಿಳಿಸಿದರು.

ಕಷ್ಟಕಾಲದಲ್ಲಿ ನನಗೆ ಎಲ್ಲರೂ ಸಹಾಯ ಮಾಡಿದರು. ದುಖದಲ್ಲಿ ಎಲ್ಲರೂ ಬಂದು ಸಾಂತ್ವನ ಹೇಳಿದರು ಎಂದು ಪಲ್ಲವಿ ಅವರು ಭಾವುಕರಾದರು. ಇದೇ ವೇಳೆ ಮಂಜುನಾಥ ರಾವ್ ಪುತ್ರ ಅಭಿಜೈ ವಿದ್ಯಾಭ್ಯಾಸದ ಬಗ್ಗೆ ಕೇಳಿ ಸಚಿವರು ಖುಷಿಪಟ್ಟರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಮಾಲತೇಶ್, ಚಂದ್ರಶೇಖರ್, ರವಿಕಿರಣ್, ಅಸ್ಸಾಂ ಸರ್ಕಾರದ ಕಾರ್ಯದರ್ಶಿ ಎನ್.ಕೈಲಾಸ್ ಕಾರ್ತಿಕ್, ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್‌ಪಿ ಅನಿಲ್‌ಕುಮಾರ್ ಭೂಮರಡ್ಡಿ, ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ಮತ್ತಿತರರಿದ್ದರು.

ಕುಟುಂಬದ ದುಃಖದಲ್ಲಿ ಭಾಗಿ

ಮಂಜುನಾಥ ರಾವ್ ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಧೈರ್ಯ ತುಂಬಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿಮಲ್ ಬೋರಾಹ್, ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಘೋರ ದುರಂತದಲ್ಲಿ ನೊಂದವರ ಜತೆ ಅಸ್ಸಾಂ ಸರ್ಕಾರ ಸದಾ ಇರಲಿದೆ. ಪಹಲ್ಗಾಮ್‌ನಲ್ಲಿ ಹತ್ಯೆಯಾದ 26 ಜನರ ಕುಟುಂಬಕ್ಕೆ ಮುಖ್ಯಮಂತ್ರಿ ಹಿಮಂತ್ ಬಿಶ್ವಾಸ್ ಶರ್ಮ ಆದೇಶದ ಮೇರೆಗೆ ಸಿಎಂ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿತ್ತು. ಕುಟುಂಬದ ದುಃಖದಲ್ಲಿ ಅಸ್ಸಾಂ ಸರ್ಕಾರ ಭಾಗಿಯಾಗಿದೆ ಎಂದರು.