ಜಿಲ್ಲೆ

ಬಂಟ್ವಾಳ ಜಯರಾಮ ಆಚಾರ್ಯರಿಗೆ ಆಸ್ರಣ್ಣ ಪ್ರಶಸ್ತಿ-2022 ಸೆ. 18ರಂದು ಕಟೀಲಿನಲ್ಲಿ ಪ್ರಶಸ್ತಿ ಪ್ರದಾನ

reportermng

ಮಂಗಳೂರು: ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಅವರ ಸ್ಮರಣಾರ್ಥ ಆಸ್ರಣ್ಣ ಶಿಷ್ಯವೃಂದ ಕದ್ರಿ ಇವರು ಕೊಡ ಮಾಡುವ ಆಸ್ರಣ್ಣ ಪ್ರಶಸ್ತಿ-2022 ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ಸೆ.18ರಂದು ಕಟೀಲಿನಲ್ಲಿ ಪ್ರದಾನ ಮಾಡಲಾಗುವುದು.


ಕಳೆದ 5 ದಶಕಗಳಿಂದ ತೆಂಕುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಹಾಸ್ಯಗಾರನಾಗಿ ಕಲಾರಸಿಕರ ಮನಗೆದ್ದಿರುವ ಖ್ಯಾತ ವಿದೂಷಕ ಜಯರಾಮ ಆಚಾರ್ಯರು, ಅಮ್ಟಾಡಿ, ಸುಂಕದ ಕಟ್ಟೆ, ಸ್ವರ್ನಾಡು, ಕಟೀಲು, ಪುತ್ತೂರು, ಕದ್ರಿ, ಕುಂಬ್ಳೆ, ಸುರತ್ಕಲ್, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿರುವ ಅನುಭವಿ ಕಲಾವಿದ.


ಪಡ್ರೆ ಚಂದು, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರಿಂದ ಯಕ್ಷಗಾನದ ಮಾರ್ಗದರ್ಶನ ಪಡೆದಿರುವ ಆಚಾರ್ಯರು ವಿಜಯ, ಮಕರಂದ, ದಾರುಕ, ಬಾಹುಕ ರಕ್ಕಸ, ದೂತ, ನಾರದ, ಇತ್ಯಾದಿ ವೈವಿಧ್ಯಮಯ ಪಾತ್ರಗಳಿಗೆ ಜೀವತುಂಬಿರುವರಲ್ಲದೆ ತುಳು ಯಕ್ಷಗಾನ ಪ್ರಸಂಗಗಳಲ್ಲೂ ತನ್ನ ವಿಶಿಷ್ಟಪೂರ್ಣ ಹಾಸ್ಯ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅನೇಕ ಬಾರಿ ವಿದೇಶದಲ್ಲೂ ಯಕ್ಷಗಾನ ಪ್ರದರ್ಶನಗಳಲ್ಲಿ ಪಾಲ್ಗೊಂಡಿರುವ ಇವರು ಯಕ್ಷಗಾನ ಮಾತ್ರವಲ್ಲದೆ, ರಂಗಭೂಮಿ, ಚಲನಚಿತ್ರಗಳಲ್ಲೂ ನಟಿಸಿದ್ದಾರೆ ಎಂದು ಗೋಪಾಲಕೃಷ್ಣ ಆಸ್ರಣ್ಣ ಶಿಷ್ಯವೃಂದ ಕದ್ರಿ ಇದರ ಸಂಚಾಲಕರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಕದ್ರಿ ನವನೀತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.